ನವದೆಹಲಿ; ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಲಭ್ಯತೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹಲವಾರು ರಾಜ್ಯಗಳು ನಮ್ಮಲ್ಲಿ ಲಸಿಕೆ ಲಭ್ಯವಿಲ್ಲ ಎಂದು ಹೇಳಿತ್ತಿವೆ. ಅದರಲ್ಲೂ ಕೊವ್ಯಾಕ್ಸಿನ್ ಬಗ್ಗೆ ದೂರುಗಳು ಹೆಚ್ಚಿವೆ.
ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಲಸಿಕೆಗೆ ಭಾರೀ ಬೇಡಿಕೆ ಬಂದಿದೆ. ಕೇಂದ್ರ ಸರ್ಕಾರ ಮೇ 1ರಿಂದ 18-44 ವರ್ಷದವರು ಲಸಿಕೆ ಪಡೆಯಲು ಒಪ್ಪಿಗೆ ನೀಡಿದೆ. ಆದರೆ 2ನೇ ಹಂತದ ಲಸಿಕೆ ನೀಡುವುದೇ ರಾಜ್ಯಗಳಿಗೆ ಸವಾಲಾಗಿದೆ.
ವಿವಿಧ ರಾಜ್ಯಗಳಲ್ಲಿ ಲಸಿಕೆ ಕೊರತೆ ಹಿನ್ನಲೆಯಲ್ಲಿ ಲಸಿಕೆ ಪೂರೈಕೆ ಮಾಡಲು ಗ್ಲೋಬಲ್ ಟೆಂಡರ್ ಮೊರೆ ಹೋಗಲು ರಾಜ್ಯಗಳು ಮುಂದಾಗಿವೆ. ಮಂಗಳವಾರ ವಿವಿಧ ರಾಜ್ಯಗಳು ಈ ಕುರಿತು ಅಧಿಕೃತವಾಗಿ ಘೋಷಣೆಯನ್ನು ಸಹ ಮಾಡಿವೆ."ಲಸಿಕೆ ಖರೀದಿ ಮಾಡಲು ಸರ್ಕಾರ ಗ್ಲೋಬಲ್ ಟೆಂಡರ್ ಕರೆಯಲಿದೆ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಹೇಳಿದ್ದಾರೆ.
ಕೇರಳ,ಕರ್ನಾಟಕ, ತೆಲಂಗಾಣ, ಓಡಿಶಾ, ಉತ್ತರ ಪ್ರದೇಶ ಸರ್ಕಾರಗಳು ಸಹ ಗ್ಲೋಬಲ್ ಟೆಂಡರ್ ಮೊರೆ ಹೋಗಿವೆ. ಲಸಿಕೆ ಸಂಗ್ರಹವಿಲ್ಲದೇ ಲಸಿಕಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಇಂತಹ ತೀರ್ಮಾನ ಮಾಡಲಾಗಿದೆ.
"ನಾವು ವಿದೇಶಿ ಕಂಪನಿಗಳಿಂದ ಲಸಿಕೆ ಪೂರೈಕೆಗೆ ಪ್ರಯತ್ನ ನಡೆಸಿದ್ದೇವೆ. ಜಾಗತಿಕ ಟೆಂಡರ್ ಕರೆದು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಆಂಧ್ರ ಪ್ರದೇಶದ ಆರೋಗ್ಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಕೊರತೆ ಎದುರಾಗಿದೆ. 18-44 ವರ್ಷದವರಿಗೆ ಲಸಿಕೆ ನೀಡುವುದು ದೂರದ ಮಾತು. ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ನೀಡಲು ಸಂಗ್ರಹ ಇಲ್ಲವಾಗಿದೆ.