ಅಮರಾವತಿ : ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ B.1.617 ಮತ್ತು B.1 ರೂಪಾಂತರ ತಳಿಯು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕಗಳಲ್ಲಿ ಅತಿಹೆಚ್ಚು ಸೋಂಕಿತರಲ್ಲಿ ಪತ್ತೆಯಾಗಿದೆ. ವಯಸ್ಕರಿಗಿಂತ ಯುವಕರಲ್ಲಿ ಈ ತಳಿಯ ಸೋಂಕು ಅತಿಹೆಚ್ಚು ಮತ್ತು ವೇಗವಾಗಿ ಹರಡುತ್ತಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.
N440K ರೂಪಾಂತರ ತಳಿಯೂ ಅಲ್ಲ ಅಥವಾ ಮೊದಲಿಗಿಂತ ತೀವ್ರವಾಗಿಲ್ಲ ಎಂಬ ಬಗ್ಗೆ ಸೆಲ್ಯುಲಾರ್ ಮತ್ತು ಆಣು ಜೀವಶಾಸ್ತ್ರ ಕೇಂದ್ರದ ಅಧ್ಯಯನವನ್ನು ಉಲ್ಲೇಖಿಸಿ ಆಂಧ್ರ ಪ್ರದೇಶದ ಆರೋಗ್ಯ ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಪತ್ತೆಯಾಗಿರುವ ಅತಿಹೆಚ್ಚು ಕೊರೊನಾವೈರಸ್ ಸೋಂಕಿತರಲ್ಲಿ B.1.617 ಮತ್ತು B.1 ರೂಪಾಂತರ ತಳಿ ಇರುವುದು ದೃಢಪಟ್ಟಿದೆ. ಈ ರೂಪಾಂತರ ಯುವಕರಿಗೆ ಅತಿಹೆಚ್ಚಾಗಿ ಹರಡುವ ಅಪಾಯಕಾರಿ ವೈರಸ್ ಆಗಿದೆ.
ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿಲ್ಲ:
ಕಳೆದ ಏಪ್ರಿಲ್ 25ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಸಾಂಕ್ರಾಮಿಕ ರೋಗದ ವಿವರಣಾತ್ಮಕ ವರದಿ ಸಲ್ಲಿಸಿದ ಸಂದರ್ಭದಲ್ಲಿ B.1.617 ರೂಪಾಂತರ ವೈರಸ್ ಬಗ್ಗೆ ಉಲ್ಲೇಖಿಸಿದೆ. ಈ ವರದಿಯಲ್ಲಿ N440K ರೂಪಾಂತರ ತಳಿಯ ಬಗ್ಗೆ ಉಲ್ಲೇಖವಾಗಿಲ್ಲ ಎಂದು ಆಂಧ್ರ ಪ್ರದೇಶದ ಕೊವಿಡ್-19 ನಿಯಂತ್ರಣ ಕೇಂದ್ರ ಪಡೆಯ ಚೇರ್ ಮೆನ್ ಕೆ ಎಸ್ ಜವಾಹರ್ ರೆಡ್ಡಿ ತಿಳಿಸಿದ್ದಾರೆ.
ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಿಂದ ಸಂಗ್ರಹಿಸಿದ ಮಾದರಿಗಳನ್ನು ಹೈದರಾಬಾದ್‌ನ ಸಿಸಿಎಂಬಿ ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿ ತಿಂಗಳು ಆಂಧ್ರ ಪ್ರದೇಶದ ಪ್ರಯೋಗಾಲಯಗಳಿಂದ ಸಿಸಿಎಂಬಿಗೆ 250 ಮಾದರಿಗಳನ್ನು ಕಳುಹಿಸಿ ಕೊಡಲಾಗುತ್ತದೆ.
ಕಳೆದ 2020ರ ಜೂನ್ ಮತ್ತು ಜುಲೈ ತಿಂಗಳಿನಲ್ಲೇ N440K ರೂಪಾಂತರ ತಳಿಯು ಪತ್ತೆಯಾಗಿತ್ತು. ಡಿಸೆಂಬರ್ ವೇಳೆಗೆ N440K ರೂಪಾಂತರ ತಳಿಯ ಪ್ರಭಾವ ತಗ್ಗಿತ್ತು. ಆದರೆ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಮತ್ತೆ ಕಾಣಿಸಿಕೊಂಡ N440K ಕೊವಿಡ್-19 ರೂಪಾಂತರ ತಳಿಯು ಮಾರ್ಚ್ ವೇಳೆಗೆ ಕ್ಷಿಪ್ರಗತಿಯಲ್ಲಿ ಹರಡಲು ಆರಂಭಿಸಿತು ಎಂದು ಕೆ ಎಸ್ ಜವಾಹರ್ ರೆಡ್ಡಿ ತಿಳಿಸಿದ್ದಾರೆ.