ಡೆಹ್ರಾಡೂನ್: 'ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಕೊರೊನಾ ವೈರಸ್ ಸಹ ಜೀವಿಯಾಗಿದ್ದು, ಅದಕ್ಕೂ ಜೀವಿಸುವ ಹಕ್ಕಿದೆ' ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅಭಿಪ್ರಾಯ ಪಟ್ಟಿದ್ದಾರೆ. ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ.
ಖಾಸಗಿ ನ್ಯೂಸ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾವತ್, 'ತಾತ್ವಿಕ ದೃಷ್ಟಿಕೋನದಿಂದ ನೋಡುವುದಾದರೆ, ಕೊರೊನಾ ವೈರಸ್ ಸಹ ಒಂದು ಜೀವಿ. ಉಳಿದ ಎಲ್ಲರಂತೆ ಅದಕ್ಕೂ ಜೀವಿಸುವ ಹಕ್ಕಿದೆ. ಆದರೆ ನಾವು (ಮನುಷ್ಯರು) ನಾವೇ ಅತಿ ದೊಡ್ಡ ಬುದ್ಧಿವಂತರು ಎಂದು ಭಾವಿಸುತ್ತೇವೆ ಹಾಗೂ ಅದನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ ಅದು ತಾನಾಗಿಯೇ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ' ಎಂದು ವಿಶ್ಲೇಷಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ನೀಡಿರುವ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ. 'ಈ ಜೀವಂತ ವೈರಸ್‌ಗೆ ಸೆಂಟ್ರಲ್ ವಿಸ್ತಾದಲ್ಲಿ ಸೂರು ಒದಗಿಸಬೇಕು' ಎಂದು ಟ್ವೀಟಿಗರು ವ್ಯಂಗ್ಯವಾಡಿದ್ದಾರೆ.
ಉತ್ತರಾಖಂಡದ ಕಾಂಗ್ರೆಸ್ ಉಪಾಧ್ಯಕ್ಷ ಸೂರ್ಯಕಾಂತ್ ಧಸಮಾನಾ ಅವರು ರಾವತ್ ಅವರ ಹೇಳಿಕೆಯ ವಿಡಿಯೊ ಹಂಚಿಕೊಂಡು ಟೀಕಿಸಿದ್ದಾರೆ. 'ಇದು ಅಸಂಬದ್ಧ ಮತ್ತು ಮೂರ್ಖತನವಾಗಿದೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಏಕೆಂದರೆ ಅವರನ್ನು ಅವರ ಪಕ್ಷವು ಮಧ್ಯದಲ್ಲೇ ಅಧಿಕಾರದಿಂದ ಬದಲಿಸಿತು' ಎಂದಿದ್ದಾರೆ.