ನವದೆಹಲಿ: ಕೊರೊನಾ ವೈರಸ್‌ನ ಉಗಮಕ್ಕೆ ಸಂಬಂಧಿಸಿದ ವಾದಗಳನ್ನು ಪುಷ್ಠೀಕರಿಸಲು ಸೂಕ್ತ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿವೃತ್ತ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.
'ಕೊರೊನಾ ವೈರಸ್ ಕೃತಕವಾಗಿ ಸೃಷ್ಟಿ ಮಾಡಲಾಗಿದ್ದೇ ಅಥವಾ ಪ್ರಾಣಿಗಳಿಂದ ತಗುಲಿದ ಸೋಂಕೇ ಎಂಬುದಕ್ಕೆ ನಿಖರ ಪುರಾವೆಗಳಿಲ್ಲ. ನಿರ್ಣಾಯಕವಾಗಿ ಏನನ್ನಾದರೂ ಹೇಳಲು ಪುರಾವೆಗಳಿಗಾಗಿ ನಾವು ಕಾಯಬೇಕಾಗಿದೆ,' ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ನಿವೃತ್ತ ಮುಖ್ಯ ವಿಜ್ಞಾನಿಯಾದ ರಮಣ್ ಗಂಗಖೇಡ್ಕರ್ ಹೇಳಿದ್ದಾರೆ.
ವೈರಸ್‌ನ ಮೂಲ ಚೀನಾದ ವುಹಾನ್ ಪ್ರಯೋಗಾಲಯ ಎಂಬ ವಾದ ಸದ್ಯ ಮುನ್ನೆಲೆಗೆ ಬಂದಿದೆ. ಕೊರೊನಾ ಮೂಲ ಪತ್ತೆಗಾಗಿ ಅಮೆರಿಕ ಎರಡನೇ ಹಂತದ ತನಿಖೆಗೂ ಮುಂದಾಗಿದೆ.
ಅಮೆರಿಕದ ಈ ನಡೆಗೆ ಚೀನಾ ಆಕ್ರೋಶಗೊಂಡಿದೆ. 'ಅಮೆರಿಕವು ರಾಜಕೀಯ ಮಾಡುತ್ತಿದೆ ಮತ್ತು ಆಪಾದನೆ ಹೊರಿಸುತ್ತಿದೆ,' ಎಂದು ಚೀನಾ ವಿದೇಶಾಂಗ ಇಲಾಖೆಯು ಟೀಕಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ಮೂಲ ವುಹಾನ್ ನಗರದ ವೈರಾಣು ಲ್ಯಾಬ್ ಎಂಬ ವಾದಗಳನ್ನು ಚೀನಾ ನಿರಾಕರಿಸಿದೆ.