ನವದೆಹಲಿ: ಬಿಹಾರದ ಬಕ್ಸಾರ್‌ನಲ್ಲಿ ಗಂಗಾ ತೀರದಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲುತ್ತಿದ್ದ ಘಟನೆ ವರದಿಯಾದ ಮಾರನೇ ದಿನವೇ ಇದೀಗ ಅಪರಿಚಿತ ಶವಗಳು ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ತೇಲುತ್ತಿದ್ದು ಇದು ಆತಂಕಕ್ಕೀಡು ಮಾಡಿದೆ.
ಮೃತದೇಹಗಳು ಎಲ್ಲಿಂದ ಬರುತ್ತಿವೆ ಎಂದು ತಿಳಿಯುವ ಸಲುವಾಗಿ ನಮ್ಮ ಅಧಿಕಾರಿಗಳು ಸ್ಥಳದಲ್ಲಿ ಮೊಕಂ ಹೂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿವೆ ಎಂದು ಘಾಜಿಪುರದ ಜಿಲ್ಲಾಧಿಕಾರಿ ಸಂಸದ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.
ಗಂಗೆಯಲ್ಲಿ ತೇಲುತ್ತಿರುವ ಮಾನವ ಶರೀರಗಳನ್ನು ನೋಡಿ ಆತಂಕಕ್ಕೀಡಾಗಿದ್ದೇವೆ. ತಮಗೆ ಎಲ್ಲಿ ರೋಗ ಹರಡುತ್ತದೆ ಎಂಬ ಭಯ ಕಾಡುತ್ತಿದೆ. ಇದು ಕೋವಿಡ್ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಗಂಗೆಯಲ್ಲಿ ಮೃತದೇಹಗಳು ತೇಲುತ್ತಿವೆ. ಅಲ್ಲದೆ ಉಬ್ಬಿದ, ಕೊಳೆತ ಶವಗಳಿಂದ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರಿದ್ದು ಅಧಿಕಾರಿಗಳ ಅಸಮರ್ಥತೆಗೆ ಆರೋಪಿಸಿದ್ದಾರೆ.
ನಾವು ಈ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ, ಆದರೆ ಅವರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ನಾವು ಕೊರೊನಾವೈರಸ್ ಸೋಂಕಿಗೆ ಒಳಗಾಗುವ ಭೀತಿ ಇದೆ ಎಂದು ನಿವಾಸಿ ಅಖಂಡ್ ಎಎನ್‌ಐಗೆ ತಿಳಿಸಿದರು.
ಬಿಹಾರದಲ್ಲಿ ಶವಗಳನ್ನು ತೇಲುತ್ತಿರುವ ಮತ್ತು ರಾಶಿ ಹಾಕಿದ ಘಟನೆಯು ದೇಶದಲ್ಲಿ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ವೈರಸ್‌ಗೆ ಬಲಿಯಾದವರ ಸಂಬಂಧಿಕರು, ಕೊನೆಯ ವಿಧಿಗಳಿಗೆ ಸ್ಥಳವನ್ನು ಹುಡುಕಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಂಗಳವಾರ ಈ ಘಟನೆಯನ್ನು "ದುರದೃಷ್ಟಕರ" ಎಂದು ಹೇಳಿದ್ದರು. "ಬಿಹಾರದ ಬಕ್ಸಾರ್ ಪ್ರದೇಶದಲ್ಲಿ ಗಂಗಾದಲ್ಲಿ ತೇಲುತ್ತಿರುವ ಶವಗಳ ಘಟನೆ ದುರದೃಷ್ಟಕರ. ಇದು ಖಂಡಿತವಾಗಿಯೂ ತನಿಖೆಯ ವಿಷಯವಾಗಿದೆ. ಮೋದಿ ಸರ್ಕಾರ ಸ್ವಚ್ಛ 'ತಾಯಿ' ಗಂಗಾಗೆ ಬದ್ಧವಾಗಿದೆ. ಈ ಘಟನೆ ಅನಿರೀಕ್ಷಿತವಾಗಿದೆ. ಸಂಬಂಧಪಟ್ಟ ರಾಜ್ಯಗಳು ತಕ್ಷಣದ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಶೇಖಾವತ್ ಟ್ವೀಟ್ ಮಾಡಿದ್ದರು.