ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತಾಂಡವವಾಡಿ ಅನೇಕ ಸಾವು-ನೋವು ಕಣ್ಣ ಮುಂದೆ ನಡೆಯುತ್ತಿದೆ. ಇಂದು ಚುನಾವಣಾ ಫಲಿತಾಂಶ ಹೊರಬಂದಿರುವ ರಾಜ್ಯಗಳಲ್ಲಿ ಗೆದ್ದ ಅಭ್ಯರ್ಥಿಗಳ ಪರ ಕಾರ್ಯಕರ್ತರ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ.
ದೇಶದಲ್ಲಿ ಕೊರೋನಾ ಇದೆಯೇ ಎಂದು ಸಂಶಯಪಡುವ ರೀತಿಯಲ್ಲಿ ಬೀದಿಗಿಳಿದು ತಮಿಳು ನಾಡು, ಪಶ್ಚಿಮ ಬಂಗಾಳದಲ್ಲಿ ಡಿಎಂಕೆ ಮತ್ತು ಟಿಎಂಸಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಸಂಭ್ರಮಾಚರಣೆ ಮಾಡುವ ಹಾಗಿಲ್ಲ ಎಂದು ಹೇಳಿದ್ದರೂ ಜನ ಕ್ಯಾರೇ ಮಾಡುತ್ತಿಲ್ಲ.
ಇಂದು ತಮ್ಮ ಬೆಂಬಲಿತ ಪಕ್ಷಗಳು ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡವರನ್ನು ತರಾಟೆಗೆ ತೆಗೆದುಕೊಂಡಿರುವ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ತುರ್ತಾಗಿ ಗೆಲುವಿನ ಸಂಭ್ರಮಾಚರಣೆಯನ್ನು ನಿಲ್ಲಿಸಿ, ಕೊರೋನಾ ಸೋಂಕು ಇರುವುದರಿಂದ ಯಾರನ್ನೂ ರಸ್ತೆಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿಸಲು ಬಿಡಬೇಡಿ, ಮುಂದುವರಿದರೆ ರಾಜ್ಯ ಆರೋಗ್ಯಾಧಿಕಾರಿಗಳು ಮತ್ತು ಇತರ ಅಧಿಕಾರಿಗಳನ್ನು ಹೊಣೆಯಾಗಿಸಿ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಅಲ್ಲದೆ ಸಂಭ್ರಮಾಚರಣೆಗೆ ತಡೆ ನೀಡದಿದ್ದರೆ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮತ್ತು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.