ನವದೆಹಲಿ: ಕೋವಿಡ್ ಪರಿಸ್ಥಿತಿ ಎದುರಿಸಲು ವಿದೇಶಗಳು ನೆರವು ನೀಡಿದ್ದ 10,953 ಆಮ್ಲಜನಕ ಕಾನ್ಸನ್‌ಟ್ರೇಟರ್ಸ್, 13,169 ಅಮ್ಲಜನಕ ಸಿಲಿಂಡರ್‌ಗಳು, 19 ಆಮ್ಲಜನಕ ಉತ್ಪಾದನಾ ಘಟಕಗಳು ಮತ್ತು 4.9 ಲಕ್ಷ ರೆಮ್‌ಡಿಸಿವಿರ್ ವಯಲ್‌ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಈ ಮಾಹಿತಿ ನೀಡಿದೆ. ಅಮೆರಿಕ, ಇಟಲಿ, ಕೆನಡಾ, ದಕ್ಷಿಣ ಕೊರಿಯಾ, ಒಮನ್, ಬ್ರಿಟನ್, ಜಪಾನ್‌ನಿಂದ ಮೇ 13,14ರಂದು ಪ್ರಮುಖ ನೆರವು ಬಂದಿವೆ. ಇವುಗಳಲ್ಲಿ 157 ಆಮ್ಲಜನಕ ಕಾನ್ಸನ್‌ಟ್ರೇಟರ್ಸ್, 900 ಆಮ್ಲಜನಕ ಸಿಲಿಂಡರ್‌ಗಳು, 338 ವೆಂಟಿಲೇಟರ್‌ಗಳು, ಬಿಪ್ಯಾಪ್, ಸಿಪ್ಯಾಪ್ ಸೇರಿವೆ.
ಸಚಿವಾಲಯದ ಪ್ರಕಾರ, 68,810 ರೆಮ್‌ಡಿಸಿವಿರ್ ವಯಲ್‌ಗಳು, 1000 ಟಾಕ್ಸಿಲಿಜುಮಬ್ ಅನ್ನು ಈ ದೇಶಗಳಿಂದ ಮೇ 13, 14ರಂದು ಸ್ವೀಕರಿಸಲಾಗಿದೆ. ಈ ಎಲ್ಲ ನೆರವುಗಳನ್ನು ಏಪ್ರಿಲ್ 27ರಿಂದ ಮೇ 13ರ ಅವಧಿಯಲ್ಲಿ ರಸ್ತೆ, ವಾಯು ಮಾರ್ಗದ ಮೂಲಕ ರಾಜ್ಯಗಳಿಗೆ ರವಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನೆರವನ್ನು ತ್ವರಿತಗತಿಯಲ್ಲಿ ವ್ಯವಸ್ಥಿತವಾಗಿ ಹಂಚಿಕೆ, ವಿತರಣೆ ಪ್ರಕ್ರಿಯೆ ನಿಯಮಿತವಾಗಿ ನಡೆದಿದೆ. ಆರೋಗ್ಯ ಸಚಿವಾಲಯವು ಇದನ್ನು ಸಮಗ್ರಹವಾಗಿ ನಿರ್ವಹಣೆ ಮಾಡುತ್ತಿದೆ. ಇದಕ್ಕಾಗಿ ನಿಯೋಜಿತ ಘಟಕವನ್ನು ಸಚಿವಾಲಯ ರೂಪಿಸಿದ್ದು, ನೆರವಿನ ಸ್ವೀಕಾರ ಮತ್ತು ಮರುಹಂಚಿಕೆ ಕಾರ್ಯದ ನಿರ್ವಹಣೆ ಮಾಡಲಿದೆ. ಈ ಪ್ರಕ್ರಿಯೆಗಾಗಿ ನಿರ್ದಿಷ್ಟ ಕಾರ್ಯಸೂಚಿಯನ್ನು ರೂಪಿಸಲಾಗಿದೆ ಎಂದು ಸಚಿವಾಲಯವು ವಿವರಿಸಿದೆ.