ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಕನಿಷ್ಠ 2.6 ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ರೈತರ ಖಾತೆಗಳಿಗೆ ಪಿಎಂ ಕಿಸಾನ್ 8ನೇ ಕಂತಿನ ಹಣ ಬಿಡುಗಡೆ ಮಾಡಿ ಮಾತನಾಡಿದ ಮೋದಿ, ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ "ಸಮರೋಪಾದಿಯಲ್ಲಿ" ಕೆಲಸ ಮಾಡುತ್ತಿದೆ. ಹೊಸ ಆಸ್ಪತ್ರೆಗಳು ಮತ್ತು ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರಗಳನ್ನು ಸ್ಥಾಪಿಸುತ್ತಿದೆ ಮತ್ತು ಔಷಧಿಗಳು ಮತ್ತು ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸುತ್ತಿದೆ ಎಂದರು.
ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆ ರಾಜ್ಯಗಳಿಗೆ ಸೂಚಿಸಿದ ಪ್ರಧಾನಿ, "ಕೊರೋನಾದ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಈ ಸಾಂಕ್ರಾಮಿಕವು ಹಳ್ಳಿಗಳಲ್ಲಿ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಪ್ರತಿಯೊಂದು ಸರ್ಕಾರವೂ ಪ್ರಯತ್ನಿಸಬೇಕು. ಗ್ರಾಮೀಣ ಜನರಲ್ಲಿ ಈ ಬಗ್ಗೆ ಜಾಗೃತಿ ಮತ್ತು ಪಂಚಾಯತ್ ಸಂಸ್ಥೆಗಳ ಸಹಕಾರವೂ ಅಷ್ಟೇ ಮುಖ್ಯ" ಎಂದು ಹೇಳಿದ್ದಾರೆ.
ಕೋವಿಡ್ ನಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಮಾಸ್ಕ್ ಗಳನ್ನು ಸರಿಯಾಗಿ ಮತ್ತು ನಿಯಮಿತವಾಗಿ ಧರಿಸುವುದು ಮುಖ್ಯ ಎಂದು ಮೋದಿ ಎಚ್ಚರಿಸಿದ್ದಾರೆ.
ಶೀತ ಮತ್ತು ಜ್ವರದಂತಹ ಕೋವಿಡ್ ರೋಗ ಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ ರೈತರಿಗೆ ಮನವಿ ಮಾಡಿದ ಪ್ರಧಾನಿ, ಆದಷ್ಟು ಬೇಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ಆಗಿ ಮತ್ತು ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.