ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್-19 ವಿರುದ್ಧದ ಲಸಿಕೆ 'ಸ್ಪುಟ್ನಿಕ್ ವಿ' ಮುಂದಿನ ವಾರದಿಂದ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, 'ಸ್ಪುಟ್ನಿಕ್ ವಿ ಮುಂದಿನ ವಾರ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ತಿಳಿಸಲು ನನಗೆ ಸಂತಸವೆನಿಸುತ್ತದೆ. ಈ ಲಸಿಕೆಯನ್ನು ರಷ್ಯಾ ಸೀಮಿತ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದೆ' ಎಂದರು.
ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು ಕೋವಿಡ್-19 ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿ ಎಂದು ವೈಜ್ಞಾನಿಕ ನಿಯತಕಾಲಿಕೆ 'ದಿ ಲ್ಯಾನ್ಸೆಟ್' ವರದಿ ಮಾಡಿದೆ.
ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ, 'ಸ್ಪುಟ್ನಿಕ್ ವಿ' ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಡಿಸಿಜಿಐ ಕಳೆದ ತಿಂಗಳು ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಭಾರತದಲ್ಲಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪನಿ ಉತ್ಪಾದಿಸುತ್ತದೆ.