ತಿರುವನಂತಪುರ: ಸಿಪಿಎಂ ಮುಖಂಡ ಕೊಡಿಯೇರಿ ಬಾಲಕೃಷ್ಣನ್ ಅವರನ್ನು ಪಕ್ಷದ ಮುಖವಾಣಿ ಪತ್ರಿಕೆ ದೇಶಾಭಿಮಾನಿಯ ಹೊಸ ಪ್ರಧಾನ ಸಂಪಾದಕರಾಗಿ ನೇಮಕ ಮಾಡಲಾಗಿದೆ. ಹಾಲಿ ಸಂಪಾದಕರಾದ ಪಿ ರಾಜೀವ್ ಅವರು ಸಚಿವರಾಗಿ ಆಯ್ಕೆಯಾಗಿರುವುದರಿಂದ ಅವರ ಸ್ಥಾನಕ್ಕೆ ಕೊಡಿಯೇರಿಯನ್ನು ನೇಮಕಗೊಳಿಸಲಾಗಿದೆ. ಈ ನಿರ್ಧಾರವನ್ನು ರಾಜ್ಯ ಸಮಿತಿ ತೆಗೆದುಕೊಂಡಿತು. ಪಿ. ರಾಜೀವ್ ಅವರು ನಾಳೆ ಪ್ರಮಾಣವಚ£ಗೈದು ಅಧಿಕಾರಕ್ಕೆ ಬರಲಿರುವ ಸಚಿವ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಲಿದ್ದಾರೆ.
ಸಿಪಿಎಂ ಮಾಜಿ ರಾಜ್ಯ ಕಾರ್ಯದರ್ಶಿಯಾದ ಕೊಡಿಯೇರಿ ಬಾಲಕೃಷ್ಣನ್ ಆರೋಗ್ಯ ಸಮಸ್ಯೆಗಳಿಂದಾಗಿ ರಜೆಯಲ್ಲಿದ್ದಾರೆ. ಆದರೆ ಸಚಿವರ ನೇಮಕ ಸೇರಿದಂತೆ ಚರ್ಚೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಕೆಜಿ ಕೇಂದ್ರದಲ್ಲಿ ನಡೆದ ಚುನಾವಣಾ ವಿಜಯೋತ್ಸವದಲ್ಲೂ ಅವರು ಉಪಸ್ಥಿತರಿದ್ದರು.
ತನ್ನ ಪುತ್ರ ಬಿನೀಶ್ ಕೊಡಿಯೇರಿಯನ್ನು ಕರ್ನಾಟಕ ಪೋಲೀಸರು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ ತರುವಾಯ ಕೊಡಿಯೇರಿ ರಜೆಯ ಮೇಲೆ ತೆರಳಿದ್ದರು.