ನವದೆಹಲಿ: ದೇಶದಲ್ಲಿ ಬಿಗಡಾಯಿಸಿರುವ ವೈದ್ಯಕೀಯ ಆಮ್ಲಜನಕ ಸಮಸ್ಯೆ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆಮ್ಲಜನಕದ ಲಭ್ಯತೆ, ಪೂರೈಕೆ ಹಾಗೂ ಬೇಡಿಕೆ ಕುರಿತಂತೆ ಪರಾಮರ್ಶಿಸಿ ಸಲಹೆ ಸೂಚನೆಗಳನ್ನು ಕೊಡುವುದಕ್ಕೆ 12 ಜನರನ್ನೊಳಗೊಂಡ ಟಾಸ್ಕ್ಫೋರ್ಸ್ ರಚಿಸಿ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಢ ಹಾಗೂ ಎಂಆರ್ ಶಾ ಅವರನ್ನೊಳಗೊಂಡ ಪೀಠ ಈ ಆದೇಶ ಮಾಡಿದೆ.
ಟಾಸ್ಕ್ಫೋರ್ಸ್ ವೈದ್ಯಕೀಯ ಆಮ್ಲಜನಕ ಪೂರೈಕೆ ಕುರಿತಂತೆ ವೈಜ್ಞಾನಿಕ ತಳಹದಿ ಮೇಲೆ ಕೆಲಸ ಮಾಡಬೇಕು ಎಂದು ಸೂಚಿಸಿದೆ. ಬಾಬುತೋಷ್ ಬಿಸ್ವಾಸ್, ನರೇಶ್ ಟೆಹರನ್, ಕೇಂದ್ರ ಸರ್ಕಾರದ ಇಬ್ಬರು ಹಾಗೂ ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿ ಇದರ ಸದಸ್ಯರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಕೋವಿಡ್ ಸೋಂಕಿಗೆ ಒಳಗಾಗಿರುವ ನೂರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಈ ಗಂಭೀರ ಸಮಸ್ಯೆ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.