ಕುಂಬಳೆ: ಮಾಜಿ ಸಚಿವ ದಿ.ಚೆರ್ಕಳಂ ಅಬ್ದುಲ್ಲ ಅವರ ರಾಜಕೀಯ, ಸಾಮಾಜಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳು ಎಂದಿಗೂ ಆಶ್ಚರ್ಯಚಕಿತಗೊಳಿಸುವಂತದ್ದು. ಎಲ್ಲರೊಂದಿಗೂ ಸೌಹಾರ್ಧದಿಂದಿದ್ದ ಅವರ ಬದುಕು ಮತ್ತು ರಾಜಕೀಯ ಜೀವನ ಅಪೂರ್ವವಾದುದು ಎಂದು ಮಂಜೇಶ್ವರ ಶಾಸಕ ಎಂಸಿ ಖಮರುದ್ದೀನ್ ಹೇಳಿದರು. ಚೆರ್ಕಳಂ ಅವರು ತಮ್ಮನ್ನು ಸಂಪರ್ಕಿಸಿದವರನ್ನು ತೃಪ್ತಿಪಡಿಸದೆ ಯಾರನ್ನೂ ಮರಳಿ ಕಳಿಸಿದವರಲ್ಲ. ದಾನ ಕಾರ್ಯವು ಒಂದು ದೊಡ್ಡ ಸಾಮಾಜಿಕ ಚಟುವಟಿಕೆಯಾಗಿದೆ ಎಂದು ಅವರು ತಿಳಿಸಿದರು.
ದುಬೈ ಮಲಬಾರ್ ಕಲಾ-ಸಾಂಸ್ಕøತಿಕ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ ರಂಜಾನ್ ಕಿಟ್ ವಿತರಣೆಗೆ ಕುಂಬಳೆ ಪ್ರೆಸ್ ಪೋರಂ ನಲ್ಲಿ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಮತ್ತು ವಿದೇಶಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಜನೋಪಯೋಗಿ ಚಟುವಟಿಕೆಗಳಲ್ಲಿ ಗಮನಾರ್ಹ ಕಾರ್ಯಗಳನ್ನು ನಿರ್ವಹಿಸುತ್ತಿರುವ ದುಬೈ ಮಲಬಾರ್ ಕಲಾ- ಸಾಂಸ್ಕೃತಿಕ ವೇದಿಕೆ ಚೆರ್ಕಳಂ ಅಬ್ದುಲ್ಲ ಅವರ ಸಂದೇಶಗಳನ್ನು ಪಾಲಿಸುವಲ್ಲಿ ಕೃತಾರ್ಥರಾಗಿರುವುದು ಮಾದರಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಎಂ.ಸಿ ಖಮರುದ್ದೀನ್ ಅವರು ರಂಜಾನ್ ರಿಲೀಫ್ ಕರಪತ್ರವನ್ನು ಚೆರ್ಕಳಂ ಅವರ ಪುತ್ರಿ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತಿ ಮಾಜಿ ಅಧ್ಯಕ್ಷೆ ಮುಮ್ತಾಜ್ ಸಮೀರಾ ಅವರಿಗೆ ಹಸ್ತಾಂತರಿಸಿದರು. ಮುಂಬೈ ಕೇರಳ ಮುಸ್ಲಿಂ ವೆಲ್ಫೇರ್ ಲೀಗ್ ಮುಖಂಡ ಎಂ.ಎ.ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಎ.ಕೆ. ಆರಿಫ್, ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಅಶ್ರಫ್ ಕೊಡ್ಯಮೆ, ಬಿ.ಎನ್. ಮುಹಮ್ಮದಲಿ, ಕೆ.ವಿ. ಯೂಸುಫ್, ಲಕ್ಷ್ಮಣ್ ಪ್ರಭು ಕುಂಬಳೆ, ಮಜೀದ್, ಸಿದ್ದೀಕ್ ದಂಡಗೋಳಿ, ರಿಯಾಜ್ ಮೊಗ್ರಾಲ್, ಅಬ್ಕೊ ಮುಹಮ್ಮದ್, ಖಲೀಲ್ ಮಾಸ್ತರ್, ಅಬ್ದುಲ್ಲಾ ಕುಂಬಳೆ, ಅಬ್ದುಲ್ ಲತೀಫ್ ಉಳುವಾರ್, ಐ ಮುಹಮ್ಮದ್ ರಫೀಕ್ ಈ ಸಂದರ್ಭದಲ್ಲಿ ಮಾತನಾಡಿದರು. ದುಬೈ ಮಲಬಾರ್ ಕಲಾ ಸಾಂಸ್ಕೃತಿ ವೇದಿಕೆಯ ಅಧ್ಯಕ್ಷ ಅಶ್ರಫ್ ಕಾರ್ಲೆ, ನಾಸರ್ ಮುಟ್ಟಂ, ಶಾಹುಲ್ ತಂಙಳ್, ಶಬೀರ್ ಕಿದೂರು ಈ ಸಂಘಟನೆಯನ್ನು ದುಬೈನಿಂದ ಮುನ್ನಡೆಸುತ್ತಿದ್ದಾರೆ.