ನವದೆಹಲಿ: ಮಾದಕ ವಸ್ತು ಪ್ರಕರಣದಲ್ಲಿ ಭಾರತ-ಅಮೆರಿಕನ್ ವ್ಯಕ್ತಿಯೊಬ್ಬರು ದೋಷಮುಕ್ತರಾಗಿದ್ದ ಆದೇಶವನ್ನು ಎಲ್ಲ ಲಿಂಕ್‌ಗಳಿಂದ ತೆಗೆದುಹಾಕುವಂತೆ ಗೂಗಲ್‌ಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಾಲಯದ ಆದೇಶ ಲಭ್ಯವಾಗುತ್ತಿರುವುದರಿಂದ ಅಮೆರಿಕದಲ್ಲಿ ತನಗೆ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಆದೇಶವನ್ನು ತೆಗೆದುಹಾಕಲು ಆದೇಶಿಸಬೇಕು ಎಂದು ಕೋರಿ ಈ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಗೂಗಲ್ ಜತೆಗೆ 'ಇಂಡಿಯನ್ ಕಾನೂನು' ವೆಬ್ ಪೋರ್ಟಲ್‌ಗೂ ಈ ನಿರ್ದೇಶನ ನೀಡಲಾಗಿದೆ. ತೀರ್ಪನ್ನು ಶಾಶ್ವತವಾಗಿ ತೆಗೆದುಹಾಕುವಂತೆ ವ್ಯಕ್ತಿಯು ಕೋರಿರುವ ಅರ್ಜಿಯ ಬಗ್ಗೆ ನಿಲುವು ವ್ಯಕ್ತಪಡಿಸುವಂತೆ ಕೇಂದ್ರ ಸರ್ಕಾರ, ಗೂಗಲ್ ಮತ್ತು ಇಂಡಿಯನ್ ಕಾನೂನುಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಈ ಆದೇಶ ನೀಡಿದ್ದಾರೆ.
'ನ್ಯಾಯಾಲಯದ ಆದೇಶವನ್ನು ಆನ್‌ಲೈನ್ ವೇದಿಕೆಗಳಿಂದ ತೆಗೆದುಹಾಕಬೇಕೇ ಎನ್ನುವ ಪ್ರಶ್ನೆ ಎದುರಾಗಿದೆ. ಒಂದೆಡೆ, ಇದು ಅರ್ಜಿದಾರರ ಖಾಸಗಿತನದ ಹಕ್ಕು ಕಾಪಾಡುವ ಅಂಶ ಒಳಗೊಂಡಿದೆ. ಇನ್ನೊಂದೆಡೆ, ಸಾರ್ವಜನಿಕರ ಮಾಹಿತಿ ಹಕ್ಕು ಸಹ ಒಳಗೊಂಡಿದೆ. ಜತೆಗೆ, ನ್ಯಾಯಾಂಗದಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶವನ್ನು ಸಹ ಹೊಂದಿದೆ' ಎಂದು ನ್ಯಾಯಾಲಯ ಹೇಳಿದೆ.
2009ರಲ್ಲಿ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಈ ವ್ಯಕ್ತಿಯ ವಿರುದ್ಧ ಮಾದಕ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. 2011ರಲ್ಲಿ ವಿಚಾರಣಾ ನ್ಯಾಯಾಲಯ ಎಲ್ಲ ಆರೋಪಗಳಿಂದ ಈ ವ್ಯಕ್ತಿಯನ್ನು ದೋಷಮುಕ್ತಗೊಳಿಸಿತ್ತು. ನಂತರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು 2013ರಲ್ಲಿ ತಿರಸ್ಕರಿಸಿದ್ದ ಹೈಕೋರ್ಟ್, ದೋಷಮುಕ್ತಗೊಳಿಸಿದ್ದನ್ನು ಎತ್ತಿ ಹಿಡಿದಿತ್ತು.
ಆದರೆ, 2013ರ ತೀರ್ಪು ಆನ್‌ಲೈನ್‌ನಲ್ಲಿ ದೊರೆಯುತ್ತಿತ್ತು. ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈ ಪ್ರಕರಣದ ಮಾಹಿತಿ ಲಭ್ಯವಾಗುತ್ತಿತ್ತು. ಹೀಗಾಗಿ, ಅತ್ಯುತ್ತಮ ಶೈಕ್ಷಣಿಕ ಅರ್ಹತೆಗಳಿದ್ದರೂ ಉತ್ತಮ ಉದ್ಯೋಗ ದೊರೆಯುತ್ತಿಲ್ಲ ಎಂದು ಈ ವ್ಯಕ್ತಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.