ಕಾಸರಗೋಡು: ವೆಳ್ಳರಿಕುಂಡಿನಲ್ಲಿ ಕೋವಿಡ್ ರೋಗಿಯನ್ನು ಪಿಕಪ್ ವ್ಯಾನ್‍ನಲ್ಲಿ ಆಸ್ಪತ್ರೆಗೆ ಸಾಗಿಸಲಾದ ಘಟನೆಯೊಂದು ನಡೆದಿದೆ. ಸೋಂಕು ಪೀಡಿತರಾದ ಕ್ಸೇವಿಯರ್ ವಿಜಯ್ ಅವರನ್ನು ಪಿಕಪ್ ವ್ಯಾನ್‍ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಘಟನೆ ಗುರುವಾರ ನಡೆದಿದೆ.
ದುರ್ದೈವವಶಾತ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಉಳಿಸಲಾಗಲಿಲ್ಲ. ಆಂಬ್ಯುಲೆನ್ಸ್ ಆಗಮನ ವಿಳಂಬಗೊಳ್ಳಲಿದೆ ಎಂಬ ಕಾರಣದಿಂದ ರೋಗಿಯನ್ನು ಪಿಕಪ್ ವ್ಯಾನ್‍ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರು ಮತ್ತು ಪಿಪಿಇ ಕಿಟ್ ಧರಿಸಿದ ಪಂಚಾಯತ್ ಅಧಿಕಾರಿಗಳು ಸ್ಥಳದಲ್ಲಿದ್ದರು. ಆಂಬ್ಯುಲೆನ್ಸ್ ಬರುವವರೆಗೆ ಕಾಯುವುದು ರೋಗಿಯ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ರೋಗಿಯನ್ನು ಪಿಕಪ್ ವ್ಯಾನ್‍ನಲ್ಲಿ ಕರೆದೊಯ್ಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿವೆ.
ಕೋವಿಡ್ ಪೀಡಿತ ಕ್ಸೇವಿಯರ್ ಮನೆಯಲ್ಲಿ ಕ್ವಾಂಟೈನ್‍ನಲ್ಲಿದ್ದವರು ಗುರುವಾರ ಹಠಾತ್ ಅನಾರೋಗ್ಯಕ್ಕೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಹೋಗಲು ಬೇರೆ ದಾರಿ ಇಲ್ಲದ ಕಾರಣ ಹತ್ತಿರದ ಪಿಕಪ್ ವ್ಯಾನ್ ಬಳಸಲಾಯಿತು. ಆಂಬ್ಯುಲೆನ್ಸ್ ಅಲ್ಲದೆ ಇತರ ವಾಹನಗಳು ಆ ವೇಳೆ ಲಭ್ಯವಾಗಿರಲಿಲ್ಲ.
ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ತಕ್ಷಣ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಬೇಕೆಂದು ವಿನಂತಿಸಿದ್ದರಿಂದ ಕೋವಿಡ್ ಸ್ವಯಂಸೇವಕರು ಪಿಕ್ ಅಪ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸೋಂಕಿನ ಪರಿಣಾಮ ಅನಾರೋಗ್ಯ ಉಲ್ಬಣಗೊಂಡು ಕ್ಸೇವಿಯರ್ ಕೊನೆಯುಸಿರೆಳೆದರು. ಕ್ಸೇವಿಯರ್ ಅವರ ಪತ್ನಿಗೂ ಕೋವಿಡ್ ದೃಢಪಟ್ಟಿದೆ.