ತಿರುವನಂತಪುರ: ರಾಜ್ಯದ ಕೊರೋನಾ ಸಾವಿಗೆ ಸಂಬಂಧಿಸಿದ ಅಂಕಿ ಅಂಶಗಳಲ್ಲಿನ ವ್ಯತ್ಯಾಸವನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ವಿ.ಮುರಲೀಧರನ್ ಒತ್ತಾಯಿಸಿದ್ದಾರೆ. ಅವರು ತಿರುವನಂತಪುರ ವೈದ್ಯಕೀಯ ಕಾಲೇಜಿನ ವೈದ್ಯರು ಬಹಿರಂಗಪಡಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೇ.12 ರಂದು ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ 70 ಕೊರೋನಾ ಪೀಡಿತರು ಮರಣವನ್ನಪ್ಪಿದ್ದರು ಎಂದು ವೈದ್ಯರು ಹೇಳುತ್ತಾರೆ. ಆದರೆ ಆ ದಿನ, ಸರ್ಕಾರದ ಅಂಕಿಅಂಶಗಳ ಪ್ರಕಾರ, ತಿರುವನಂತಪುರ ಜಿಲ್ಲೆಯಲ್ಲಿ 14 ಜನರು ಮಾತ್ರ ಸಾವನ್ನಪ್ಪಿದ್ದಾರೆ. ಆ ಸಂದರ್ಭ ರಾಜ್ಯದಲ್ಲಿ ಅಧಿಕೃತ ಸಾವಿನ ಸಂಖ್ಯೆ 95 ಆಗಿತ್ತು. ಆದ್ದರಿಂದ ತಿರುವನಂತಪುರ ವೈದ್ಯಕೀಯ ಕಾಲೇಜಿನ ಮಿಕ್ಕುಳಿದ 56 ಶವಗಳು ಎಲ್ಲಿಗೆ ಹೋಗಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ವೈದ್ಯಕೀಯ ಕಾಲೇಜು ಶವಾಗಾರದಲ್ಲಿ ವೈದ್ಯರು ಹೇಳುವಂತೆ ದೇಹವನ್ನು ಇರಿಸಲು ಸ್ಥಳಗಳ ಅಭಾವ ಯಾಕಾಯಿತೆಂಬುದನ್ನು ಸರ್ಕಾರ ಹೇಳಬೇಕೆಂದು ವಿ.ಮುರಳೀಧರನ್ ತಿಳಿಸಿದರು.
ಬಿಡುಗಡೆಯಾದ ಮಾಹಿತಿಯು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ನೀಡಿದ ಅಂಕಿ ಅಂಶಗಳಿಗೆ ಹೊಂದಿಕೆಯಾಗುವುದಿಲ್ಲ. ಪತ್ರಿಕೆಗಳಲ್ಲಿ ಮರಣ ಸುದ್ದಿಗಳು ತುಂಬಿತುಳುಕುತ್ತಿವೆ. ಅನೇಕ ಸ್ನೇಹಿತರು ಇದನ್ನು ತನ್ನ ಗಮನಕ್ಕೆ ತಂದಿದ್ದಾರೆ. ತಿರುವನಂತಪುರದ ವೈದ್ಯರ ಬಹಿರಂಗಪಡಿಸುವಿಕೆಯು ಈ ಎಲ್ಲವನ್ನು ದೃಢಪಡಿಸುತ್ತದೆ ಎಂದು ಮುರಲೀಧರನ್ ಬೊಟ್ಟುಮಾಡಿದರು.
ನೈಜತೆಯನ್ನು ಮರೆಮಾಚಿ ವಂಚನೆಯ ವರದಿಯನ್ನು ತಯಾರಿಸಿ ಸುಖಾಸುಮ್ಮನೆ ನಗುವ ಯತ್ನ ಮಾಡುತ್ತಿರುವುದು ಆರಂಭದಿಂದಲೂ ಗಮನಕ್ಕೆ ಬಂದಿದೆ. ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಸರ್ಕಾರದ ಪ್ರಚಾರ ಕಾರ್ಯಗಳಿಗೆ ಮಾತ್ರ ಲಾಭವಾಗುತ್ತದೆ. "ಉತ್ತರ ರಾಜ್ಯಗಳಲ್ಲಿ ಮೃತರ ಸುದ್ದಿಗೆ ಯಾರೂ ಕಾಳಜಿ ತೋರುತ್ತಿಲ್ಲ" ಎಂದು ಅವರು ಹೇಳಿದರು.
ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಮರಣ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾದುದೆಂದು ರಾಜ್ಯ ಸರ್ಕಾರ ಪದೇ ಪದೇ ಹೇಳಿಕೊಂಡಿದೆ. ರೋಗಿಗಳ ಸಂಖ್ಯೆ ದೇಶದಲ್ಲಿ ಪ್ರಥಮ ಸ್ಥಾನವನ್ನು ತಲುಪಿದ್ದಾಗಲೂ ಕೇರಳ ಇದನ್ನೇ ಹೇಳಿತ್ತು. ಆದರೆ ಕೇರಳದಲ್ಲಿ ನಿಜವಾದ ಸಾವಿನ ಪ್ರಮಾಣ ಎಷ್ಟು? ಎಂಬುದು ಊಹಾತೀತ ಎಂದು ಮುರಲೀಧರನ್ ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.