ನವದೆಹಲಿ: ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ವಿಧಿಸಿರುವ ನೂತನ ಗೌಪ್ಯತಾ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್, ಫೇಸ್'ಬುಕ್'ಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಾಟ್ಸಾಪ್ ನೂತನ ಗೌಪ್ಯತಾ ನೀತಿ ಕುರಿತು ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ವಾಟ್ಸಾಪ್ ನೂತನ ಗೌಪ್ಯತಾ ನೀತಿ ಮೇ.15 ರಿಂದ ಜಾರಿಗೆ ಬಂದಿದ್ದು, ಇದು ಬಳಕೆಗಾರರ ಗೌಪ್ಯತಾ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ನಮ್ಮ ನೀತಿ ಜಾರಿಗೆ ತರುವುದನ್ನು ಮುಂದೂಡಲಾಗಿಲ್ಲ. ಮೇ.15ರಿಂದಲೇ ಜಾರಿಗೆ ಬಂದಿದೆ. ನೂತನ ನೀತಿಗಳನ್ನು ಒಪ್ಪದ ಬಳಕೆದಾರರ ಖಾತೆಗಳನ್ನು ರದ್ದು ಮಾಡುವುದಿಲ್ಲ. ಪ್ರೋತ್ಸಾಹ ನೀಡುವಂತೆ ಬಳಕೆದಾರರ ಮನವೊಲಿಸುವ ಪ್ರಯತ್ನ ಮಾಡುತ್ತೇವೆಂದು ವಿಚಾರಣೆ ವೇಳೆ ವಾಟ್ಸಾಪ್ ಹೇಳಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಹೊಸ ನೀತಿ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ, ವಾಟ್ಸಾಪ್ ಮತ್ತು ಫೇಸ್ಬುಕ್'ಗೆ ನೋಟಿಸ್ ಜಾರಿ ಮಾಡಿದ್ದು, ಮುಂಜಿನ ವಿಚಾರಣೆಯನ್ನು ಜೂನ್.3ಕ್ಕೆ ಮುಂದೂಡಿದೆ.