ಇಡುಕ್ಕಿ: ಕೇರಳ ಮತ್ತು ತಮಿಳುನಾಡುಗಳನ್ನು ಸಂಪರ್ಕಿಸುವ ಚಿನ್ನಾರ್ ಸೇತುವೆ ವಿವಾಹ ಉತ್ಸವಕ್ಕೆ ಸಾಕ್ಷಿಯಾಯಿತು. ಮೊದಲ ಲಾಕ್ ಡೌನ್ ಸಂದರ್ಭ ಇಲ್ಲಿ 11 ವಿವಾಹಗಳು ನಡೆದಿದ್ದವು. ಮದುವೆಯ ಋತುವಲ್ಲೇ ಇದೀಗ ಎರಡನೇ ಕೊರೊನಾ ತರಂಗ ಮತ್ತು ಲಾಕ್ ಡೌನ್ ಇರುವ ಕಾರಣ ಸೇತುವೆಯ ಮೇಲೆ ಮೊದಲ ವಿವಾಹ ಕಳೆದ ಸೋಮವಾರ ನಡೆಯಿತು.
ಇಡುಕ್ಕಿ ಮರೂರಿನ ಉಣ್ಣಿಕೃಷ್ಣನ್ ಮತ್ತು ತಮಿಳುನಾಡಿನ ತಂಕಮ್ಮ ನಡುವಿನ ವಿವಾಹ ಸೇತುವೆಯಲ್ಲಿ ನಡೆಯಿತು. ಕೊರೋನಾ ಪರೀಕ್ಷೆಯ ಹೆಚ್ಚುವರಿ ವೆಚ್ಚವು ಇಂತಹ ವಿವಾಹವನ್ನು ನಡೆಸುವ ನಿರ್ಧಾರಕ್ಕೆ ಕಾರಣವಾಯಿತು. ಆರಂಭದಲ್ಲಿ, ಅನೇಕ ಜನರಿಗೆ ಸಂಪರ್ಕತಡೆ ಇದ್ದ ಹಿನ್ನೆಲೆಯಲ್ಲಿ ಸೇತುವೆಯನ್ನೇ ತಮ್ಮ ವಿವಾಹದ ಸ್ಥಳವಾಗಿ ಆಯ್ಕೆ ಮಾಡಿಕೊಂಡರು. ಸರಳವಾದ ವಿವಾಹ ಸಮಾರಂಭವಾಗಿತ್ತು. ಎರಡೂ ರಾಜ್ಯಗಳ ಪೋಲೀಸ್, ಆರೋಗ್ಯ, ಅರಣ್ಯ ಮತ್ತು ಅಬಕಾರಿ ಇಲಾಖೆಗಳ ಅಧಿಕಾರಿಗಳು ಮದುವೆಗೆ ಸಾಕ್ಷಿಯಾದರು.
ಗಡಿಯುದ್ದಕ್ಕೂ ಜನರಿಗೆ ಕೊರೋನಾ ಪರೀಕ್ಷೆ ತುಂಬಾ ದುಬಾರಿಯಾಗಿದೆ. ವಧುವಿನ ಕುಟುಂಬದ ಪ್ರಕಾರ, ಉದುಮಾಲ್ ಪೇಟ್ ನಲ್ಲಿ ಕೊರೋನಾ ಪರೀಕ್ಷೆ ಮಾಡಲು ಪ್ರತಿ ವ್ಯಕ್ತಿಗೆ 2,500 ರೂ.ಭರಿಸಬೇಕಾಗುತ್ತದೆ. ಇಂತಹ ಸನ್ನಿವೇಶವು ಸೇತುವೆಯ ಮೇಲೆ ವಿವಾಹ ನಡೆಸಲು ಉಣ್ಣಿಕೃಷ್ಣನ್ ಮತ್ತು ತಂಕಮ್ಮ ಅವರ ಕುಟುಂಬದವರಿಗೆ ಅನಿವಾರ್ಯವಾಯಿತು.
ಗಡಿ ಪ್ರದೇಶಗಳ ಹಳ್ಳಿಗಳಲ್ಲಿ ಎರಡೂ ರಾಜ್ಯಗಳಲ್ಲಿ ವಾಸಿಸುವ ಕುಟುಂಬಗಳ ನಡುವಿನ ಮದುವೆ ಸಾಮಾನ್ಯವಾಗಿದೆ. ಆದರೆ ಲಾಕ್ ಡೌನ್ ಜಾರಿಗೆ ಬಂದ ಬಳಿಕ, ಅಂತರ್ ರಾಜ್ಯ ಪ್ರಯಾಣದ ಮೇಲೆ ಅನೇಕ ನಿಬರ್ಂಧಗಳು ಈ ಕುಟುಂಬಗಳಿಗೆ ಮದುವೆಯಾಗಲು ತೊಡಕಾಗಿದೆ. ಈ ಹಿನ್ನೆಲೆಯಲ್ಲಿಯೇ ಎರಡು ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ವಿವಾಹ ವೇದಿಕೆಯಾಗಬೇಕಾಯಿತು.