ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಆಕ್ಸಿಜನ್ ಉಪಕರಣಗಳ ಕಾಳದಂಧೆಗೆ ಸಂಬಂಧಿಸಿದಂತೆ ನಗರದ ಹಲವು ಜನಪ್ರಿಯ ರೆಸ್ಟೊರೆಂಟ್ಗಳ ಮಾಲೀಕ ನವ್ನೀತ್ ಕಾಲ್ರ ಮೇಲೆ ಇದೀಗ ಪೊಲೀಸರ ದೃಷ್ಟಿ ನೆಟ್ಟಿದೆ. ಕಾಲ್ರಗೆ ಸೇರಿದ ಮೂರು ರೆಸ್ಟೊರೆಂಟ್ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಅಕ್ರಮ ದಾಸ್ತಾನುಗಳು ಪತ್ತೆಯಾಗಿದೆ ಎನ್ನಲಾಗಿದೆ.
ಮೊನ್ನೆ ಲೋಧಿ ಕಾಲೋನಿಯ ನೆಗೆ ಜು ರೆಸ್ಟೊಬಾರ್ನ ಶೋಧಕಾರ್ಯ ನಡೆಸಿದ ದೆಹಲಿ ಪೊಲೀಸರು, ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಅವರ ಮಾಹಿತಿಯ ಮೇಲೆ ಒಟ್ಟು 419 ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅದು ಬಿಸಿನೆಸ್ಮನ್ ಕಾಲ್ರಗೆ ಸೇರಿದ ರೆಸ್ಟೊರೆಂಟ್ ಎಂದು ತಿಳಿದುಬಂದಿತ್ತು.
ನಿನ್ನೆ ಬೆಳಿಗ್ಗೆ ಅದೇ ಲೋಧಿ ಕಾಲೋನಿಯ ಟೌನ್ ಹಾಲ್ ರೆಸ್ಟೊರೆಂಟ್ ಮೇಲೆ ಪೊಲೀಸರು ರೇಡ್ ನಡೆಸಿದಾಗ ಒಂಭತ್ತು ಕಾನ್ಸಂಟ್ರೇಟರ್ಗಳು ಪತ್ತೆಯಾಗಿವೆ. ಖಾನ್ ಮಾರ್ಕೆಟ್ನಲ್ಲಿರುವ ಖಾನ್ ಚಾಚಾ ಎಂಬ ಮತ್ತೊಂದು ರೆಸ್ಟೊರೆಂಟ್ಗೆ ರೇಡ್ ಮಾಡಿದಾಗ ಅಲ್ಲಿ 100 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಸಿಕ್ಕಿವೆ. ಎರಡೂ ರೆಸ್ಟೊರೆಂಟ್ಗಳು ಕಾಲ್ರಗೆ ಸೇರಿದವು ಎನ್ನಲಾಗಿದೆ. ಒಟ್ಟು, 524 ಕಾನ್ಸಂಟ್ರೇಟರ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಖಾನ್ ಚಾಚಾ ರೆಸ್ಟೊರೆಂಟ್ನ ಹೊರಗೆ ಜನರು ಆಕ್ಸಿಜನ್ ಉಪಕರಣ ಖರೀದಿಸಲು ಕ್ಯೂ ನಿಂತಿರುವ ವಿಡಿಯೋ ಮತ್ತು ಕಾಲ್ರ ಉಪಕರಣಗಳ ಪೂರೈಕೆ ಬಗ್ಗೆ ಮಾತನಾಡಿರುವ ವಾಟ್ಸಾಪ್ ಚಾಟ್ಗಳ ಫೋಟೋಗಳನ್ನು ಇಂಡಿಯಾ ಟುಡೇ ಪ್ರಸಾರ ಮಾಡಿದೆ ಎನ್ನಲಾಗಿದೆ. ಈ ಎಲ್ಲ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆಕ್ಸಿಜನ್ ಉಪಕರಣಗಳ ಕಾಳದಂಧೆಯ ಸೂತ್ರಧಾರ ಎಂಬ ಅನುಮಾನದ ಮೇಲೆ ನವ್ನೀತ್ ಕಾಲ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.