ತಿರುವನಂತಪುರ: ಕೇರಳದ ಮೂಲಕ ಸಂಚರಿಸುವ ಮತ್ತೂ ಮೂರು ರೈಲುಗಳನ್ನು ರದ್ದುಪಡಿಸಲಾಗಿದೆ. ಕೊಚುವೇಲಿ-ಮೈಸೂರು ಎಕ್ಸ್‍ಪ್ರೆಸ್, ಕೊಚುವೇಲಿ-ನಿಲಾಂಬೂರ್ ರಾಜಧಾನಿ ಮತ್ತು ಅಮೃತ ಎಕ್ಸ್‍ಪ್ರೆಸ್ ರದ್ದಾಗಿದೆ. ಮೇ. 15 ರಿಂದ 31 ರವರೆಗೆ ರೈಲುಗಳನ್ನು ಸ್ಥಗಿತಗೊಳಿಸಲಾಗುವುದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮೂರು ವಾರಗಳಲ್ಲಿ ರಾಜ್ಯದಲ್ಲಿ ನಿಲ್ಲಿಸಿದ ರೈಲುಗಳ ಸಂಖ್ಯೆ 65 ಕ್ಕೆ ತಲುಪಿದೆ.
ಈ ಹಿಂದೆ ಕೇರಳದಲ್ಲಿ ದೂರದ ಪ್ರಯಾಣ ಸೇರಿದಂತೆ 44 ರೈಲುಗಳನ್ನು ರದ್ದುಪಡಿಸಲಾಗಿತ್ತು. ತಿರುವನಂತಪುರದಿಂದ ಚೆನ್ನೈಗೆ ಎರಡು ಸೂಪರ್ ಫಾಸ್ಟ್ ರೈಲುಗಳು, ಮಂಗಳೂರು-ಚೆನ್ನೈ, ಎರ್ನಾಕುಳಂ-ಲೋಕಮಾನ್ಯ ತಿಲಕ್, ಕೊಚುವೇಲಿ-ಪೆÇರ್ಬಂದರ್, ಕೊಚುವೇಲಿ-ಇಂದೋರ್, ವಂಚಿನಾಡ್ ಎಕ್ಸ್‍ಪ್ರೆಸ್, ಎರ್ನಾಕುಳಂ-ಶೋರ್ನೂರ್, ಎರ್ನಾಕುಳಂ-ಅಲಪ್ಪುಳ ರೈಲುಗಳನ್ನು ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ರದ್ದುಪಡಿಸಲಾಗಿತ್ತು.