ಕಾಸರಗೋಡು: ಅಸ್ಸಾಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಅಸ್ಸಾಂನ ಜಟಿಲ ರಾಜಕೀಯ ಇತಿಹಾಸದಲ್ಲಿ ಈಬಾರಿ ಬಿಜೆಪಿ ಅಧಿಕಾರ ಸೂತ್ರವನ್ನು ವಹಿಸಿಕೊಂಡಿರುವುದು ಅತಿವಿಶಿಷ್ಟವೆಂದೇ ರಾಜಕೀಯ ವಿಶ್ಲೇಷಕರು ಬೊಟ್ಟುಮಾಡಿದ್ದು, ಹಿರಿಯ ಬಿಜೆಪಿ ನಾಯಕ ಶರ್ಮ ಅವರ ಸುಧೀರ್ಘ ಅವಧಿಯ ರಾಜಕೀಯ ಹೋರಾಟ ವಿಶಿಷ್ಟವಾಗಿ ಈಗ ದಾಖಲಿಸಲ್ಪಟ್ಟಿದೆ.
ಶರ್ಮ ಅವರ ರಾಜಕೀಯ ವಿಜಯಕ್ಕೂ ಕಾಸರಗೋಡಿಗೂ ಬಹುದೊಡ್ಡ ನಂಟಿದೆ ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಎಲ್ಲಿಯ ಅಸ್ಸಾಂ, ಎಲ್ಲಿಯ ಕಾಸರಗೋಡು!
ಹೌದು, ಹಿಮಂತ ಬಿಸ್ವಾ ಶರ್ಮರ ಯಶಸ್ಸಿನ ಹಿಂದಿನ ಆಧ್ಯಾತ್ಮಿಕ ಶಕ್ತಿಯ ಪ್ರಮುಖ ಕೊಂಡಿ ಕಾಸರಗೋಡು. ಕಾಸರಗೋಡಿನ ಪೆರಿಯ ಸಮೀಪದ ಗೋಕುಲಮ್ ಗೋಶಾಲೆಯ ಸಂಚಾಲಕರಾಗಿರುವ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಪೂಚಕ್ಕಾಡ್ ಅವರು ಕಳೆದ ಹತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ಶರ್ಮ ಅವರ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಲ್ಲೇ ಅತೀ ಎತ್ತರದ ಶಿವ ಕ್ಷೇತ್ರವೆಂದೇ ಖ್ಯಾತಿಗಳಿಸಿರುವ ಅಸ್ಸಾಮಿನ ನೌಗಾವ್ ಜಿಲ್ಲೆಯ ಪುರಾಣಿ ಗೋದಾಮ್ ಗ್ರಾಮದ ದೇವಾಲಯದಲಲಿ ಕಳೆದ 2020ರ ಫೆ.22 ರಿಂದ ಮಾ.3ರ ವರೆಗೆ ನಡೆದ ಪ್ರತಿಷ್ಠಾ ಕಾರ್ಯಕ್ರಮದ ಪ್ರಧಾನ ನೇತೃತ್ವ ವಹಿಸಿದ್ದವರು ಇದೇ ವಿಷ್ಣು ಪ್ರಸಾದ ಹೆಬ್ಬಾರರು. ಅಂದಿನ ವೈದಿಕ ವಿಧಿ ವಿಧಾನಗಳಿಗೆ ಕಾಸರಗೋಡು, ಕೇರಳ ಮತ್ತು ಕರ್ನಾಟಕದ ಪ್ರತಿಷ್ಠಿತ ಹಿರಿಯ ವೈದಿಕ ವಿದ್ವಾಂಸರು ಹೆಬ್ಬಾರರ ನೇತೃತ್ವದಲ್ಲಿ ಪ್ರತಿಷ್ಠಾ ವಿಧಿ ನಿರ್ವಹಿಸಿದ್ದರು. ಅಂದಹಾಗೆ ಆ ಶಿವಕ್ಷೇತ್ರ ಪ್ರತಿಷ್ಠಾ ವ್ಯವಸ್ಥೆಯ ಸಮಿತಿಗೆ ಶರ್ಮ ಅಧ್ಯಕ್ಷರಾಗಿದ್ದರು.