ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದಿನ ಜೂನ್ ತಿಂಗಳಲ್ಲೂ ಮುಂದುವರಿಸಬೇಕೆ ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ತಜ್ಞರ ಸಮಿತಿಯು ಈ ನಿರ್ಧಾರ ತೆಗೆದುಕೊಳ್ಳಲಿದೆ. ದಿನವೊಂದರ ಸೋಂಕಿತರ ಸಂಖ್ಯೆ ಮತ್ತು ಪರೀಕ್ಷಾ ಸಕಾರಾತ್ಮಕ ದರವನ್ನು ಪರಿಗಣಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವೀಣಾ ಜಾರ್ಜ್ ಹೇಳಿರುವರು.
ಮೇ ತಿಂಗಳಾಂತ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಮೇ ನಂತರ ಲಾಕ್‍ಡೌನ್ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಪ್ರಸ್ತುತ ಬಿಗಿ ನಿಯಂತ್ರಣದ ಪರಿಣಾಮವನ್ನು ಮುಂದಿನ ತಿಂಗಳಲ್ಲಿ ಅನುಭವಕ್ಕೆ ಬರಲಿದೆ ಎಂದು ವೀಣಾ ಜಾರ್ಜ್ ಹೇಳಿದರು.
ಕೋವಿಡ್ ಜೊತೆಗೆ ಡೆಂಗ್ಯೂ ಮುಂತಾದ ಇತರ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗುತ್ತಿದೆ. ಈ ಕಾಯಿಲೆಗಳ ವಿರುದ್ಧವೂ ಜನರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವರು ಆಗ್ರಹಿಸಿದರು.