ನವದೆಹಲಿ: ಲಕ್ಷದ್ವೀಪದ ಆಡಳಿತಾಧಿಕಾರಿಯು ಕಳೆದ ಐದು ತಿಂಗಳಲ್ಲಿ 15-20 ದಿನವಷ್ಟೇ ಅಲ್ಲಿಗೆ ಭೇಟಿ ನೀಡಿದ್ದು, ಸ್ಥಳೀಯ ಪರಿಸರ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಯಾವುದೇ ರೀತಿಯಲ್ಲಿ ಯತ್ನಿಸಿಲ್ಲ ಎಂದು ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ್ವೀಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ವಿವಾದಿತ ಕಾಯ್ದೆ ಜಾರಿ ವಿರುದ್ಧ ಕಾನೂನು ನೆರವು ಪಡೆಯುವ ಚಿಂತನೆಯೂ ಇದೆ ಎಂದು ಅವರು ತಿಳಿಸಿದರು.
ಆಡಳಿತಾಧಿಕಾರಿ ಸ್ಥಾನದಿಂದ ಪ್ರಫುಲ್ ಪಟೇಲ್ ಅವರನ್ನು ವಾಪಸು ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಎನ್‌ಸಿಪಿ ಮುಖಂಡರೂ ಆದ ಫೈಜಲ್, ಕರಡು ಮಸೂದೆಗಳಿಗೆ ಲಕ್ಷದ್ವೀಪದಲ್ಲಿ ಎಲ್ಲ ಕ್ಷೇತ್ರಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಬಿಜೆಪಿ ಮುಖಂಡರೂ ಅದರ ವಿರುದ್ಧ ಇದ್ದಾರೆ ಎಂದು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ (ಎಲ್‌ಡಿಎಆರ್) ಮತ್ತು ಲಕ್ಷದ್ವೀಪ ಸಮಾಜವಿರೋಧಿ ಚಟುವಟಿಕೆ ನಿಯಂತ್ರಣ ಕಾಯ್ದೆ (ಎಲ್‌ಪಿಎಎಸ್‌ಎಆರ್) ಕುರಿತಂತೆ ಸ್ಥಳೀಯವಾಗಿ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗಿದೆ ಎಂದು ಫೈಜಲ್ ಅಭಿಪ್ರಾಯಪಟ್ಟರು.
ಸ್ಥಳೀಯರು ಮತ್ತು ಮುಖಂಡರ ಅಭಿಪ್ರಾಯವನ್ನು ಪಡೆಯದೇ ಪಟೇಲ್ ಅವರು ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು. ದಿನೇಶ್ವರ ಶರ್ಮಾ ಅವರ ನಿಧನದ ನಂತರ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಪಟೇಲ್ ಅವರಿಗೆ ಆಡಳಿತಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು.