ತಿರುವನಂತಪುರ: ರಾಜ್ಯದಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜೀವನಾವಶ್ಯಕ ಔಷಧಿಗಳನ್ನು ಒದಗಿಸಲು ವ್ಯಾಪಕವಾದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಹೇಳಿದ್ದಾರೆ. ಲಾಕ್ಡೌನ್ ನಂತರ, ಜಿಲ್ಲೆಯ ಹೊರಗಿನ ಪ್ರಯಾಣದ ನಿರ್ಬಂಧದಿಂದಾಗಿ ಔಷಧಿಗಳ ವಿತರಣೆಗೆ ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ನಿತ್ಯ ಬಳಸುವ ಅತಿತುರ್ತು ಔಷಧಿಗಳನ್ನು ತಲುಪಿಸಲು ಮಾತ್ರ ಈ ವ್ಯವಸ್ಥೆ ಇದೆ ಮತ್ತು ಈ ಮೂಲಕ ಸಾಮಾನ್ಯ ಔಷಧಿಗಳು ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು.
ಈ ಉದ್ದೇಶಕ್ಕಾಗಿ ತಿರುವನಂತಪುರ ಮತ್ತು ಕೊಚ್ಚಿಯಲ್ಲಿ ವಿಶೇಷ ಸಾರಿಗೆ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಹೆದ್ದಾರಿ ಗಸ್ತು ವಾಹನಗಳಿಂದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಔಷಧಿಗಳನ್ನು ಸಾಗಿಸಲಾಗುತ್ತದೆ. ಈ ವ್ಯವಸ್ಥೆಯನ್ನು ನಡೆಸಲು ದಕ್ಷಿಣ ವಲಯದ ಐಜಿ ಹರ್ಷಿತಾ ಅತಲ್ಲೂರಿ ಅವರನ್ನು ರಾಜ್ಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಹೆದ್ದಾರಿ ಎಚ್ಚರಿಕೆ ಸೆಲ್ ಔಷಧಿಗಳ ವಿತರಣೆಯ ಉಸ್ತುವಾರಿ ಗಮನಿಸುತ್ತದೆ.
ಈ ಸೌಲಭ್ಯ ಪಡೆಯಲು ಪೊಲೀಸರನ್ನು 112 ಟೋಲ್ ಪ್ರೀ ಸಂಖ್ಯೆಗೆ ಸಂಪರ್ಕಿಸಬಹುದು. ರೋಗಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಪೊಲೀಸ್ ಠಾಣೆಯ ಹೆಸರನ್ನು ದಾಖಲಿಸುವ ಮೂಲಕ ಪೊಲೀಸರು ಸಂಗ್ರಹಿಸಿದ ಮಾಹಿತಿಯನ್ನು ನೋಡಲ್ ಅಧಿಕಾರಿಗೆ ಮಾಹಿತಿ ನೀಡುವರು. ವಿಶೇಷ ವಾಹನ ಅಥವಾ ಹೆದ್ದಾರಿ ಗಸ್ತು ವಾಹನದಲ್ಲಿ ಔಷಧಿಗಳನ್ನು ಗೊತ್ತುಪಡಿಸಿದ ಸ್ಥಳಕ್ಕೆ ತಲುಪಿಸಲು ನೋಡಲ್ ಅಧಿಕಾರಿ ಅಗತ್ಯ ಸೂಚನೆಗಳನ್ನು ನೀಡಲಿದ್ದಾರೆ.
ವೈದ್ಯಕೀಯ ಕಾಲೇಜು, ತಿರುವನಂತಪುರ ಮತ್ತು ಕೊಚ್ಚಿಯ ಕೇಂದ್ರ ಪೊಲೀಸ್ ಠಾಣೆ ಔಷಧ ಸಂಗ್ರಹ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ವೈದ್ಯರು, ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಂಬಂಧಿಕರು ಸಹ ಈ ಕೇಂದ್ರಗಳಲ್ಲಿ ಔಷಧಿ ವಿತರಿಸಬಹುದು. ಜಿಲ್ಲೆಯೊಳಗೆ ಔಷಧಿಗಳನ್ನು ತಲುಪಿಸಬೇಕಾದರೆ, ಅವುಗಳನ್ನು ಸಂಗ್ರಹಿಸಿ ಜನಮೈತ್ರಿ ಪೊಲೀಸರ ಮೂಲಕ ಹಸ್ತಾಂತರಿಸುವುದು ಆಯಾ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಔಷಧಿಗಳು ಬದಲಾಗದಂತೆ ಮತ್ತು ಸರಿಯಾದ ವಿಳಾಸವನ್ನು ತಲುಪುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಹೇಳಿರುವರು.