ವಾಷಿಂಗ್ಟನ್ : ಕೋವಿಡ್-19 ಸಾಂಕ್ರಾಮಿಕದ ಮೂಲದ ಬಗ್ಗೆ ತಳಮಟ್ಟದ ಅಂಶ ಬಯಲಾಗಬೇಕು. ಈ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕಂಡುಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಅಮೆರಿಕ ಪ್ರತಿಪಾದಿಸಿದೆ. ಶ್ವೇತಭವನದ ಕೊರೋನಾ ವೈರಸ್ ಸಲಹೆಗಾರ ಈ ಕುರಿತು ಹೇಳಿಕೆ ನೀಡಿದ್ದಾರೆ.
"ಈ ಸಮಸ್ಯೆಯ ತಳಮಟ್ಟದ ಅಂಶ ತಿಳಿಯಬೇಕು ಎನ್ನುವುದು ನಮ್ಮ ಬಲವಾದ ನಿಲುವು. ಈ ನಿಟ್ಟಿನಲ್ಲಿ ಚೀನಾದಿಂದ ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯನ್ನು ನಾವು ಬಯಸುತ್ತೇವೆ. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೆರವಾಗಬೇಕು. ಅದು ಈಗ ಇದೆ ಎಂದು ನಮಗೆ ಅನಿಸುವುದಿಲ್ಲ" ಎಂದು ಶ್ವೇತಭವನದ ಕೋವಿಡ್ ಸಲಹೆಗಾರ ಆಯಂಡಿ ಸ್ಲ್ಯಾವಿಟ್ ಹೇಳಿದ್ದಾರೆ.
ಕೊರೋನಾ ವೈರಸ್ ಮೂಲದ ಬಗ್ಗೆ ಯಾವ ಉತ್ತರ ಬಂದರೂ ಅದು ನಮ್ಮ ಪ್ರಮುಖ ಆದ್ಯತೆಯ ವಿಚಾರವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಪತ್ರಿಕಾ ವಿವರಣೆಯ ವೇಳೆ ಈ ಸಂಬಂಧ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ಬೈಡನ್ ಆಡಳಿತದ ವೈದ್ಯಕೀಯ ಸಲಹೆಗಾರ ಡಾ.ಆಂಟನಿ ಫೌಸಿ, ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಈ ಸಂಬಂಧ ನಡೆಸಿದ ತನಿಖೆಯ ಮುಂದಿನ ಹಂತ ಅಗತ್ಯವಿದ್ದು, ವಿಶ್ವ ಈ ಶೋಧನೆಯನ್ನು ಮುಂದುವರಿಸಬೇಕು ಎನ್ನುವುದು ನಮ್ಮ ಬಲವಾದ ಭಾವನೆ ಎಂದು ವಿವರಿಸಿದರು.
ಮೂಲ ಏನು ಎನ್ನುವುದು ನಮಗೆ ಶೇಕಡ 100ರಷ್ಟು ಸ್ಪಷ್ಟವಾಗಿ ತಿಳಿದುಬಂದಿಲ್ಲ. ನಾವು ಇದನ್ನು ನೋಡುವುದು ಮತ್ತು ಶೋಧಿಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಚೀನಾದಲ್ಲಿ ಮೊದಲ ಕೋವಿಡ್ ರೋಗಲಕ್ಷಣ ಕಾಣಿಸಿಕೊಂಡ ವರದಿ ಪ್ರಕಟವಾಗುವ ಮುನ್ನವೇ 2019ರ ನವೆಂಬರ್‌ನಲ್ಲಿ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೋರಲಾಗಿತ್ತು ಎಂದು ವಾಲ್‌ಸ್ಟ್ರೀಟ್ ಜರ್ನಲ್ ಸ್ಫೋಟಕ ಸುದ್ದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.