ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ಮತ್ತು ಅತಿ ವೇಗದ ಸಾಂಕ್ರಾಮಿಕ ರೂಪಾಂತರ ತಳಿ ವ್ಯಾಪಕವಾಗಿ ಹಬ್ಬುತ್ತದೆ ಎಂದು ವೈಜ್ಞಾನಿಕ ಸಲಹೆಗಾರರು ಮಾರ್ಚ್ ತಿಂಗಳ ಆರಂಭದಲ್ಲೇ ನೀಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿತು ಎಂದು ಐವರು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಈ ವೈಜ್ಞಾನಿಕ ಸಲಹೆಗಾರರ ತಂಡವನ್ನು ಸರ್ಕಾರವೇ ರಚಿಸಿತ್ತು. ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ, ಯಾವುದೇ ರೀತಿಯ ಪ್ರಮುಖ ನಿರ್ಬಂಧಗಳನ್ನು ವಿಧಿಸಲಿಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿ, ಮಾಸ್ಕ್ ಧರಿಸದೆ ಬೃಹತ್ ಸಂಖ್ಯೆಯಲ್ಲಿ ಜನರು ಧಾರ್ಮಿಕ ಉತ್ಸವಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ್ದ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
ಹೊಸ ರೂಪಾಂತರ ತಳಿ ಬಗ್ಗೆ ಮಾರ್ಚ್ ತಿಂಗಳ ಆರಂಭದಲ್ಲೇ ಭಾರತದ ಸಾರ್ಸ್ ಕೋವ್-2 ಜೆನೆಟಿಕ್ಸ್ ಕಾನ್ಸೊರ್ಟಿಯಮ್ (ಐಎನ್‌ಎಸ್‌ಎಸಿಒಜಿ) ಎಚ್ಚರಿಕೆ ನೀಡಿತ್ತು. ಪ್ರಧಾನಿ ಅವರಿಗೆ ನೇರವಾಗಿ ವರದಿ ಮಾಡಿಕೊಳ್ಳುವ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಉತ್ತರ ಭಾರತದ ಸಂಶೋಧನಾ ಕೇಂದ್ರದಲ್ಲಿ ಈ ವಿಜ್ಞಾನಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನಿ ಅವರಿಗೆ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದರೋ ಅಥವಾ ಇಲ್ಲವೋ ಎನ್ನುವುದನ್ನು 'ರಾಯಿಟರ್ಸ್' ದೃಢಪಡಿಸಿಕೊಂಡಿಲ್ಲ. ಪ್ರಧಾನಮಂತ್ರಿ ಕಚೇರಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಐಎನ್‌ಎಸ್‌ಎಸಿಒಜಿ ಪತ್ತೆ ಮಾಡಿದ ಅಂಶಗಳನ್ನು ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ರೋಗಗಳ ನಿಯಂತ್ರಣ ಕೇಂದ್ರದ (ಎನ್‌ಎಸ್‌ಡಿಸಿ) ಜತೆಯೂ ಮಾರ್ಚ್ 10ಕ್ಕೆ ಮುನ್ನವೇ ಹಂಚಿಕೊಳ್ಳಲಾಗಿತ್ತು. ದೇಶದ ಹಲವು ಭಾಗಗಳಲ್ಲಿ ಸೋಂಕು ವೇಗವಾಗಿ ಹಬ್ಬುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಮಾಹಿತಿಯನ್ನು ಆರೋಗ್ಯ ಸಚಿವಾಲಯಕ್ಕೂ ಕಳುಹಿಸಲಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್‌ನ ರೂಪಾಂತರಗಳ ಬಗ್ಗೆ ನಿರ್ದಿಷ್ಟವಾಗಿ ಪತ್ತೆ ಮಾಡುವ ಉದ್ದೇಶದಿಂದಲೇ ಸರ್ಕಾರ ವೈಜ್ಞಾನಿಕ ಸಲಹೆಗಾರರನ್ನು ಒಳಗೊಂಡಿರುವ ವೇದಿಕೆಯಾದ 'ಐಎನ್‌ಎಸ್‌ಎಸಿಒಜಿ' ರಚಿಸಿತ್ತು.
'ಬಿ.1.617' ರೂಪಾಂತರ ತಳಿಯನ್ನು 'ಐಎನ್‌ಎಸ್‌ಎಸಿಒಜಿ' ಫೆಬ್ರುವರಿ ಆರಂಭದಲ್ಲೇ ಪತ್ತೆ ಮಾಡಿತ್ತು. ಈಗ ಇದನ್ನು ವೈರಸ್‌ನ ಭಾರತೀಯ ತಳಿ ಎಂದು ಕರೆಯಲಾಗುತ್ತಿದೆ ಎಂದು ಜೀವ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಮತ್ತು 'ಐಎನ್‌ಎಸ್‌ಎಸಿಒಜಿ' ಸದಸ್ಯ ಅಜಯ್ ಪರಿಡಾ ತಿಳಿಸಿದ್ದಾರೆ.
'ಇ484ಕ್ಯೂ' ಮತ್ತು 'ಎಲ್452ಆರ್' ರೂಪಾಂತರ ತಳಿಯ ಬಗ್ಗೆಯೂ ವಿಜ್ಞಾನಿಗಳು ವಿವರಿಸಿದ್ದರು. ಮಾನವನ ಕೋಶಕ್ಕೆ ಸುಲಭವಾಗಿ ಪ್ರವೇಶಿಸುವ ಈ ತಳಿ, ದೇಹದಲ್ಲಿನ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಎಂದು ಆರೋಗ್ಯ ಸಚಿವಾಲಯಕ್ಕೆ ತಿಳಿಸಿದ್ದರು. ಆದರೆ, ಮಾರ್ಚ್ 24ರಂದು ಸಾರ್ವಜನಿಕವಾಗಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ 'ಅತಿ ಹೆಚ್ಚು ಅಪಾಯ' ಅಥವಾ 'ಅತಿ ಹೆಚ್ಚು ಆತಂಕ' ಎನ್ನುವ ಶಬ್ದಗಳು ಇರಲಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸರ್ಕಾರ ನಿರ್ಬಂಧಗಳನ್ನು ವಿಧಿಸಲು ಏಕೆ ಮುಂದಾಗಲಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ 'ಐಎನ್‌ಎಸ್‌ಎಸಿಒಜಿ' ಅಧ್ಯಕ್ಷ ಶಹೀದ್ ಜಮೀಲ್, 'ಅಧಿಕಾರಿಗಳು ಸಾಕ್ಷ್ಯಗಳ ಬಗ್ಗೆ ಗಮನಹರಿಸಲಿಲ್ಲ. ಸಾಕ್ಷ್ಯಗಳ ಆಧಾರದ ಮೇಲೆ ನೀತಿ ರೂಪಿಸಬೇಕು. ನೀತಿಗಳನ್ನು ರೂಪಿಸುವಾಗ ವಿಜ್ಞಾನವನ್ನು ಪರಿಗಣಿಸದಿರುವುದು ಆತಂಕ ಮೂಡಿಸಿದೆ. ವಿಜ್ಞಾನಿಯಾಗಿ ಸಾಕ್ಷ್ಯಗಳನ್ನು ಕೊಡಬಹುದು. ಆದರೆ, ನೀತಿಗಳನ್ನು ರೂಪಿಸಿವುದು ಸರ್ಕಾರದ ಜವಾಬ್ದಾರಿ' ಎಂದು ಹೇಳಿದ್ದಾರೆ.