ನವದೆಹಲಿ : ಭಾರತದಲ್ಲಿ ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಅಗತ್ಯ ಔಷಧಿಗಳಿಗೆ ಕೊರತೆ ಕಾಣಿಸುತ್ತಿದೆ. ಈ ಮಧ್ಯೆ ಕರೊನಾಗೆ ಪರ್ಯಾಯ ಚಿಕಿತ್ಸೆ ಹುಡುಕುವ ಪ್ರಯತ್ನದಲ್ಲಿ ಇನ್ನೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲದ ಪತಂಜಲಿ ಆಯುರ್ವೇದದ 'ಕೊರೊನಿಲ್' ಹರ್ಬಲ್ ಮಾತ್ರೆಗಳ ಬಗ್ಗೆ ಅನೇಕ ನೆಟ್ಟಿಗರು ಮಾಹಿತಿ ಪಡೆಯಲು ಪ್ರಯತ್ನಿಸಿರುವುದು ಕಂಡುಬಂದಿದೆ ಎನ್ನಲಾಗಿದೆ.
ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಕಂಪೆನಿ ಮಾರುಕಟ್ಟೆಗೆ ಬಿಟ್ಟಿರುವ 'ಕೊರೊನಿಲ್' ಬಗೆಗೆ ಮಾಡಲಾದ ಗೂಗಲ್ ಸರ್ಚ್ಗಳಲ್ಲಿ ಕಳೆದ 90 ದಿನಗಳಲ್ಲಿ ಭಾರೀ ಏರಿಕೆ ಉಂಟಾಗಿದೆ ಎಂದು ಫೋರ್ಬ್ಸ್ ಸಂಸ್ಥೆ ವರದಿ ಮಾಡಿದೆ. ಗೂಗಲ್ ಟ್ರೆಂಡ್ಸ್ ಡೇಟಾ ಪ್ರಕಾರ ಏಪ್ರಿಲ್ ತಿಂಗಳ ಮಧ್ಯಕಾಲದಲ್ಲಿ ಇದರ ಸರ್ಚ್ ಟ್ರೆಂಡ್ಗಳು ಹೆಚ್ಚಿದ್ದವು ಎನ್ನಲಾಗಿದೆ.
ನೂರು ಯುವ ರೋಗಿಗಳ ಮೇಲೆ ನಡೆಸಿದ ಅಧ್ಯಯನವನ್ನು ಆಧರಿಸಿ ರಾಮ್ದೇವ್ ಅವರು ಕರೊನಾ ರೋಗಲಕ್ಷಣಗಳ ವಿರುದ್ಧ ಕೊರೊನಿಲ್ ಪರಿಣಾಮಕಾರಿಯಾಗಿದೆ ಎಂದು ದಾವೆ ಮಾಡಿದ್ದರು. ಆಯುರ್ವೇದ ಮತ್ತು ಹೊಮಿಯೊಪಥಿಯಂತಹ ಪರ್ಯಾಯ ವೈದ್ಯಪದ್ಧತಿಗಳಿಗೆ ಬೆಂಬಲ ನೀಡುವ ಆಯುಷ್ ಸಚಿವಾಲಯವು 'ಕರೊನಾ ರೋಗಿಗಳಿಗೆ ಪೋಷಕ ಚಿಕಿತ್ಸೆ' ಎಂದು ಕರೆದು ಕೊರೊನಿಲ್ಗೆ ಲೈಸೆನ್ಸ್ ನೀಡಿತ್ತು ಎನ್ನಲಾಗಿದೆ.
ಆದರೆ ಐಸಿಎಂಆರ್ ಇದಕ್ಕೆ ಯಾವುದೇ ಪುರಾವೆ ಇಲ್ಲ, ರೋಗಿಗಳನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಕೊರೊನಿಲ್ ಮಾತ್ರೆಗಳ ಪರೀಕ್ಷೆ ನಡೆಸಿದ ಬರ್ಹಿಂಗ್ಹ್ಯಾಮ್ ಯೂನಿವರ್ಸಿಟಿ ಕರೊನಾ ವಿರುದ್ಧ ಹೋರಾಡುವ ಅಂಶಗಳಿಲ್ಲ ಎಂದು ವರದಿ ನೀಡಿತ್ತು ಎಂದು ಬಿಬಿಸಿ ವರದಿ ಮಾಡಿತ್ತು. ಆದರೂ, ಆನ್ಲೈನ್ ಮಾರಾಟ ವೇದಿಕೆಗಳಲ್ಲಿ ವೈದ್ಯರ ಸಲಹೆಯಿಲ್ಲದೆ ಖರೀದಿಸಲು ಅವಕಾಶವಿದೆ ಎನ್ನಲಾಗಿದೆ.