ತಿರುವನಂತಪುರ: ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಲಿರುವ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಯುಡಿಎಫ್ ನಾಯಕರು ಭಾಗವಹಿಸುವುದಿಲ್ಲ. ಎರಡನೇ ತರಂಗದ ಕೊರೋನ ಉಲ್ಬಣಗೊಳ್ಳುತ್ತಿರುವ ಈ ಪರಿಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಸರಿಯಲ್ಲ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಹೇಳಿದ್ದಾರೆ. ಸಮಾರಂಭವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದು ಮನೆಯಿಂದಲೇ ವೀಕ್ಷಿಸುವುದಾಗಿ ಹಸನ್ ವ್ಯಂಗ್ಯವಾಡಿದ್ದಾರೆ.
ಕೊರೋನಾ ತುಂಬಾ ತೀವ್ರವಾಗಿರುವ ಈಗಿನ ಪರಿಸ್ಥಿತಿಯಲ್ಲಿ, ತುಂಬಾ ಸರಳವಾಗಿ, ಸಾಂಕೇತಿಕ ಕ್ರಮಗಳೊಂದಿಗೆ ಪ್ರಮಾಣ ವಚನ ಸಮಾರಂಭ ನಡೆಸಬೇಕಿತ್ತು. ಕ್ರೀಡಾಂಗಣದಲ್ಲಿ ಪ್ರಮಾಣವಚನ ಏರ್ಪಡಿಸಿರುವುದು ಹಾಸ್ಯಾಸ್ಪದ. ಅದು ಪ್ರಮಾಣವಚನವಲ್ಲ. ಮಂತ್ರಿಗಳು ಅಧಿಕಾರ ವಹಿಸಿಕೊಳ್ಳುವ ಸಂಭ್ರಮದ ಸಮಾರಂಭವಾಗಿದೆ. ಮುಖ್ಯಮಂತ್ರಿ ಹೇಳಿದಂತೆ ಬಹಿಷ್ಕಾರ ಮಾಡುತ್ತಿಲ್ಲ. ಟಿವಿಯಲ್ಲಿ ವೀಕ್ಷಿಸಲಾಗುವುದು ಎಂದು ಹಸನ್ ವ್ಯಂಗ್ಯೋಕ್ತಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
140 ಶಾಸಕರು ಮತ್ತು 20 ಸಂಸದರು ಸೇರಿದಂತೆ 500 ಮಂದಿ ಪ್ರಮಾಣವಚನ ಸ್ವೀಕಾರ ಸಮಾರಂ¨sದಲ್ಲಿ ಪಾಲ್ಗೊಳ್ಳಿಸಲು ಎಲ್ಡಿಎಫ್ ನಿರ್ಧರಿಸಿದೆ. ಇದು ಸೋಷಿಯಲ್ ಮೀಡಿಯಾ ಸೇರಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿದೆ. 500 ಜನರು ಭಾಗವಹಿಸುವುದು ಕಾನೂನು ಉಲ್ಲಂಘನೆಯಲ್ಲ ಎಂದು ಮುಖ್ಯಮಂತ್ರಿಗಳು ಸೋಮವಾರ ತಿಳಿಸಿದ್ದು, ತೀವ್ರ ಟೀಕೆಗೂ ಕಾರಣವಾಗಿದೆ.