ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಬಿರುಸಿನ ಗಾಳಿಮಳೆ ಮತ್ತು ಪ್ರಬಲ ಕಡಲ್ಕೊರೆತ ಮುಂದುವರಿದಿದೆ. ಸಣ್ಣಪುಟ್ಟ ವಿಚಾರಗಳನ್ನು ಉಳಿದು ದೊಡ್ಡ ಪ್ರಮಾಣದ ನಾಶ-ನಷ್ಟ ಸಂಭವಿಸಿಲ್ಲ.
ಕಾಸರಗೋಡು ಚೇರಂಗಾಯಿಯಲ್ಲಿ 4 ಮನೆಗಳು ಜಲಾವೃತವಾಗಿವೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಉಪ್ಪಳ ಮುಸೋಡಿ ಕರಾವಳಿಯಲ್ಲಿ 2 ಮನೆಗಳು ಪೂರ್ಣರೂಪದಲ್ಲಿ ಹಾನಿಗೊಂಡಿವೆ. ಇನ್ನೊಂದು ಮನೆ ಅಪಾಯದ ಅಂಚಿನಲ್ಲಿದೆ. ಇಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ವೆಳ್ಲರಿಕುಂಡ್ ತಾಲೂಕಿನ ಬಳಾಲ್ ಗ್ರಾಮದಲ್ಲಿ ಬಿರುಸಿನ ಮಳೆಗೆ 2 ಮನೆಗಳು ಭಾಗಶಃ ಹಾನಿಗೊಂಡಿವೆ. ಚಿತ್ತಾರಿ ಗ್ರಾಮದಲ್ಲಿ 2 ಮನೆಗಳು ಜಲಾವೃತವಾಗಿವೆ. ಇಲ್ಲಿನ ನಿವಾಸಿಗಳನ್ನು ಸಂಬಮಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ನೀಲೇಶ್ವರ ಗ್ರಾಮದಲ್ಲಿ ತೆಂಗಿನಮರ ಉರುಳಿ ಮನೆಯೊಂದು ಭಾಗಶಃ ಹಾನಿಗೊಂಡಿದೆ.
ವೆಳ್ಳರಿಕುಂಡ್ ತಾಲೂಕಿನಲ್ಲಿ 63 ಮಿ.ಮೀ. ಮಳೆ ಸುರಿದಿರುವುದು ಗಣನೆಯಾಗಿದೆ. ಪಿಲಿಕೋಡ್ ವಲಯದಲ್ಲಿ 85.5 ಮಿ.ಮೀ. ಮಳೆ ಬಂದಿದೆ. ಸುರಕ್ಷೆ ಕ್ರಮಗಳ ಅಂಗವಾಗಿ 35 ಸದಸ್ಯರ ಭೂಸೇನೆ ತಂಡವನ್ನು ಕಾಸರಗೋಡು ಜಿಲ್ಲೆಯಲ್ಲಿ ನೇಮಕಗೊಳಿಸಲಾಗಿದೆ.
ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ:
ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಡಿ ಮಳೆ ಮುಂದುವರಿದಿದೆ. ಮಂಗಳೂರು ಕಡಲ ತೀರದಲ್ಲಿ ಅಲೆಗಳ ನರ್ತನವೂ ಜಾಸ್ತಿಯಾಗಿದ್ದು, ಸದ್ಯ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ.