ಕಾಸರಗೋಡು:ಸರ್ಕಾರಿ ವೃದ್ಧಾಶ್ರಮಗಳು ಸೇರಿದಂತೆ ವಿವಿಧ ವೃದ್ಧ ಮಂದಿರಗಳಲ್ಲಿ ಕೋವಿಡ್ ಸೋಂಕಿನ ಆತಂಕಕಾರಿ ಪರಿಸ್ಥಿತಿಯಲ್ಲಿ ಏಕಾಂಗಿತನದೊಂದಿಗೆ ವಾಸಿಸುತ್ತಿರುವ ವಯೋವೃದ್ಧರನ್ನು ಹಾಡುಗಳ ಆಲಾಪನೆ, ಆನ್ ಲೈನ್ ಮೂಲಕ ಸಿನಿಮಾ-ಕಿರುತೆರೆ ಸಹಿತ ವಿವಿಧ ವಲಯಗಳ ಗಣ್ಯರೊಂದಿಗೆ ಸಂವಾದ ಇತ್ಯಾದಿ ಮೂಲಕ ಸಾಂತ್ವನ ನೀಡಿ ಮುದಗೊಳಿಸುವ ಆನ್ ಲೈನ್ ಸರಣಿ 'ಸ್ನೇಹಸಲ್ಲಾಪ'ಕಾರ್ಯಕ್ರಮ ಪರವನಡ್ಕ ಸರ್ಕಾರಿ ವೃದ್ಧಾಶ್ರಮದಲ್ಲಿ ಆರಂಭಗೊಂಡಿತು.
ಕಾಸರಗೋಡು ಜಿಲ್ಲಾಡಳಿತ ಮತ್ತು ಸಾಮಾಜಿಕ ನೀತಿ ಇಲಾಖೆ ಜಿಲ್ಲಾ ಘಟಕ ಜಂಟಿಯಾಗಿ ನಡೆಸಿದ ಕಾರ್ಯಕ್ರಮದಲ್ಲಿ ವಯೋವೃದ್ಧರಿಗೆ ಹಾಡುವ ಅವಕಾಶ ನೀಡಲಾಗಿತ್ತು. ಇದೇ ವೇಳೆ ಚಲನಚಿತ್ರ, ಟಿವಿ ತಾರೆಯರೊಂದಿಗೆ ಸಂವಾದ ನಡೆಸಲೂ ಅವಕಾಶ ಒದಗಿಸಲಾಗಿತ್ತು. ವಿವಿಧ ವಲಯಗಳಲ್ಲಿ ಸಾಧನೆ ನಡೆಸುತ್ತಿರುವ ಮಕ್ಕಳೂ ಇಲ್ಲಿ ಭಾಗವಹಿಸುತ್ತಿದ್ದಾರೆ. ಇದು ವೃದ್ಧಾಶ್ರಮ ನಿವಾಸಿಗಳಿಗೆ ನೂತನ ಅನುಭವ ನೀಡುತ್ತಿದೆ.
ಪರವನಡ್ಕ ವೃದ್ಧಾಶ್ರಮದ 17 ಮಂದಿ ವೃದ್ಧೆಯರು, 21 ಮಂದಿ ವೃದ್ಧರು ಪಾಲ್ಗೊಂಡರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಜಿಲ್ಲಾ ಮಟ್ಟದ ಸರಣಿ ಉದ್ಘಾಟಿಸಿದರು. ಪ್ರತಿ ಸದಸ್ಯರನ್ನು ಕರೆದು ಮಾತನಾಡಿಸುವ ಮೂಲಕ ವಿಭಿನ್ನ ರೀತಿ ಜಿಲ್ಲಾಧಿಕಾರಿ ಸಮಾರಂಭಕ್ಕೆ ಚಾಲನೆ ನೀಡಿದರು. ಚೆಮ್ನಾಡು ನಿವಾಸಿ, ಸಿನಿಮಾ- ಕಿರುತೆರೆ ಕಲಾವಿದೆ ಶ್ರೀವಿದ್ಯಾ ಮುಲ್ಲಚ್ಚೇರಿ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಷೀಬಾ ಮುಂತಾಝ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ವೃದ್ಧಾಶ್ರಮ ಪ್ರಭಾರ ವರಿಷ್ಠಾಧಿಕಾರಿ ಅಬ್ದುಲ್ಲ ಮಡಿಯನ್, ಎಲ್.ಬಿ.ಎಸ್. ಕಾಲೇಜು ವಿದ್ಯಾರ್ಥಿ ನಿತಿನ್ ಮೊದಲಾದವರು ಆನ್ ಲೈನ್ ಮೂಲಕ ಭಾಗವಹಿಸಿದ್ದರು. ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಪಿ.ಬಿಜು ಸ್ವಾಗತಿಸಿದರು. ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ವಂದಿಸಿದರು. ಕಾಸರಗೋಡು ಜಿಲ್ಲೆಯ 20 ವೃದ್ಧಾಶ್ರಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.