ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಧಾನ ರಾಜ್ಯ ಹೆದ್ದಾರಿಗಳಲ್ಲಿ ಒಂದಾಗಿರುವ ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರೀ ಬಿಲ್ಡ್ ಕೇರಳ ಯೋಜನೆಯಿಂದ 100 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ತಿಳಿಸಿದರು.
ಜರ್ಮನ್ ತಾಂತ್ರಿಕತೆ ಸಹಾಯದೊಂದಿಗೆ ಕಾಮಗಾರಿ ನಡೆಯಲಿದೆ. ಕೆ.ಎಸ್.ಟಿ.ಪಿ. 2021ರಲ್ಲಿ ನಿರ್ಮಿಸಿರುವ ಈ ರಸ್ತೆಯ ಅಭಿವೃದ್ಧಿ ಚಟುವಟಿಕೆಯನ್ನು ಮರಳಿ ಕೆ.ಎಸ್.ಟಿ.ಪಿ.ಯೇ ವಹಿಸಿಕೊಳ್ಳಲಿದೆ. ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ 7 ವರ್ಷಗಳ ಕಾಲ ರಸ್ತೆಯ ಸಂಪೂರ್ಣ ಸಂರಕ್ಷಣೆಯ ಹೊಣೆ ಹೊಂದಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿ ನಡೆಸಿದ್ದ ಒ.ಪಿ.ಬಿ.ಆರ್.ಸಿ.(ಔಟ್ ಪುಟ್ & ಪೆರ್ ಫಾರ್ಮೆನ್ಸ್ ಬೇಸ್ ಡ್ ರೋಡ್ ಕಾಂಟ್ರಾಕ್ಟ್) ಕರಾರಿನ ಪ್ರಕಾರ ಕಾಮಗಾರಿಯ ಟೆಂಡರ್ ನಡೆಯಲಿದೆ ಎಂದು ಶಾಸಕ ತಿಳಿಸಿದರು.
ಜಿಲ್ಲೆಯಲ್ಲಿ ಮೆಕ್ ಡಾಂ ಡಾಮರೀಕರಣ(ಬಿ.ಎಂ.& ಬಿ.ಸಿ.) ನಡೆಸಿದ ಮೊದಲ ಹಾದಿ ಚೆರ್ಕಳ-ಜಾಲ್ಸೂರು ಹೆದ್ದಾರಿ ರಸ್ತೆಯಾಗಿದೆ. 2021ರಲ್ಲಿ ಕೆ.ಎಸ್.ಟಿ.ಪಿ.ಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚೆರ್ಕಳ ಜಂಕ್ಷನ್ ನಿಂದ ಆರಂಭಿಸಿ ಕರ್ನಾಟಕದ ಜಾಲ್ಸೂರು ವರೆಗಿನ 39.138 ಕಿ.ಮೀ. ಉದ್ದದ ಈ ರಸ್ತೆಯ ನಿರ್ಮಾಣ ನಡೆಸಿತ್ತು. 2015ರಲ್ಲಿ ಪೂರ್ಣರೂಪದಲ್ಲಿ ನವೀಕರಿಸಬೇಕಿದ್ದ ಈ ರಸ್ತೆಯಲ್ಲಿ ಕುಳಿಗಳ ದುರಸ್ತಿಯಲ್ಲದೆ, ಬೇರೆ ಕಾಮಗಾರಿಗಳು ನಡೆದಿರಲಿಲ್ಲ. ತಿರುವು ಅಧಿಕವಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಇರುವ ಈ ರಸ್ತೆಯಲ್ಲಿ ಅಪಘಾತ ನಿತ್ಯ ಘಟನೆಗಳಾಗಿವೆ ಎಂಬ ವಿಚಾರಗಳನ್ನು ಉಲ್ಲೇಖಿಸಿ ಶಾಸಕ ಸಚಿವರಿಗೆ ಮನವಿ ಸಲ್ಲಿಸಿದ್ದರು. ಸದ್ರಿ 5.50 ಮೀಟರ್ ಅಗಲದಲ್ಲಿ ಡಾಮರೀಕರಣವಿದೆ. ವಾಹನ ದಟ್ಟಣೆ ಅಧಿಕವಾಗಿರುವ ರಸ್ತೆಯಲ್ಲಿ ಅಪಘಾತಕ್ಕೆ ಇದೂ ಕಾರಣವಾಗುತ್ತಿದೆ. 10 ರಿಂದ 12 ಮೀಟರ್ ವರೆಗೆ ಜಾಗ ಲಭ್ಯತೆಯಿರುವ ಈ ರಸ್ತೆ ಜಾಗ ಅಕ್ವೇರ್ ನಡೆಸದೆಯೇ ಅಭಿವೃದ್ಧಿ ನಡೆಸಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೀ ಬಿಲ್ಡ್ ಕೇರಳ ಯೋಜನೆಯಲ್ಲಿ ಅಳವಡಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.