ತಿರುವನಂತಪುರ: ಕೋವಿಡ್ ಲಸಿಕೆ ಸಮಸ್ಯೆಯನ್ನು ಬಗೆಹರಿಸಲು ಸಮಗ್ರ ಕ್ರಮ ಕೈಗೊಳ್ಳಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಹೊರತುಪಡಿಸಿ ಇತರ 11 ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಲಸಿಕೆಯನ್ನು ಕೇಂದ್ರದಿಂದ ನೇರವಾಗಿ ಸಂಗ್ರಹಿಸಿ ಉಚಿತವಾಗಿ ವಿತರಿಸಬೇಕೆಂದು ಜಂಟಿಯಾಗಿ ಒತ್ತಾಯಿಸುವಂತೆ ಪತ್ರವು ರಾಜ್ಯಗಳಿಗೆ ಕರೆ ನೀಡಿದೆ.
ಈ ಪತ್ರವನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‍ಗಡ, ಒಡಿಶಾ, ಪಶ್ಚಿಮ ಬಂಗಾಳ, ಜಾಖರ್ಂಡ್, ದೆಹಲಿ, ಪಂಜಾಬ್, ರಾಜಸ್ಥಾನ ಮತ್ತು ಮಹಾರಾಷ್ಟ್ರ ಗಳೆಂಬ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಕೋವಿಡ್‍ನ ಎರಡನೇ ಅಲೆಯಲ್ಲಿ ದೇಶ ಸಾಗುತ್ತಿರುವಾಗ ರಾಜ್ಯಗಳಿಗೆ ಲಸಿಕೆಗಳನ್ನು ನೀಡುವ ಜವಾಬ್ದಾರಿಯನ್ನು ಕೇಂದ್ರ ಕೈಬಿಡುತ್ತಿರುವುದು ದುರದೃಷ್ಟಕರ ವರ್ತನೆ ಎಂದು ಮುಖ್ಯಮಂತ್ರಿ ಹೇಳಿರುವರು. ರಾಜ್ಯಗಳು ಲಸಿಕೆಯನ್ನು ತಾವಾಗಿಯೇ ವ್ಯವಸ್ಥೆಗೊಳಿಸಬೇಕೆಂದು ಕೇಂದ್ರ ತಿಳಿಸಿತ್ತು. ಆದಾಗ್ಯೂ, ಲಸಿಕೆ ಬಹಳ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿದೆ.
ಲಸಿಕೆ ಲಭ್ಯವಾಗುವಂತೆ ವಿದೇಶಿ ಔಷಧ ಕಂಪನಿಗಳು ರಾಜ್ಯ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಪಿಣರಾಯಿ ವಿಜಯನ್ ಗಮನಸೆಳೆದಿದ್ದಾರೆ. ಆದ್ದರಿಂದ, ಎಲ್ಲಾ ರಾಜ್ಯಗಳ ಲಸಿಕೆ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಲು ಕೇಂದ್ರವು ಜಾಗತಿಕ ಟೆಂಡರ್ ಕರೆಯುವಂತೆ ಕೇರಳ ಪ್ರಧಾನ ಮಂತ್ರಿಗೆ ಪತ್ರ ಕಳುಹಿಸಿದೆ ಎಂದು ಅವರು ಹೇಳಿದರು.
ಎರಡನೇ ಅಲೆಯ ಬಳಿಕ ಮೂರನೇ ತರಂಗವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದಲ್ಲಿ, ಅದನ್ನು ಎದುರಿಸಲು ಸಿದ್ಧರಾಗಿರಬೇಕು. ಅದಕ್ಕಾಗಿ, ಸಾರ್ವತ್ರಿಕ ವ್ಯಾಕ್ಸಿನೇಷನ್ ಮೂಲಕ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಲಸಿಕೆಯನ್ನು ಸಾರ್ವಜನಿಕ ಹಿತಕ್ಕಾಗಿ ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡಬೇಕಾಗಿದೆ. ಹಣದ ಕೊರತೆಯಿಂದಾಗಿ ಯಾರಿಗೂ ಲಸಿಕೆ ನಿರಾಕರಿಸಲಾಗುವುದಿಲ್ಲ ಎಂದು ಪಿಣರಾಯಿ ವಿಜಯನ್ ಗಮನ ಸೆಳೆದಿರುವರು.
ಲಸಿಕೆ ದಾಸ್ತಾನು ಮಾಡುವ ಸಂಪೂರ್ಣ ಜವಾಬ್ದಾರಿ ರಾಜ್ಯಗಳ ಮೇಲೆ ಬಿದ್ದರೆ, ರಾಜ್ಯಗಳ ಆರ್ಥಿಕ ಸ್ಥಿತಿ ಅಪಾಯಕ್ಕೆ ಸಿಲುಕುತ್ತದೆ. ಭಾರತದಲ್ಲಿ ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯಗಳ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಅದನ್ನು ಸವಾಲಿಗೊಡ್ಡುವುದು ನಮ್ಮ ಸಂಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಇದರ ಜೊತೆಗೆ, ಕಠಿಣ ರೋಗನಿರೋಧಕ ಶಕ್ತಿಯನ್ನು ಬೆಳೆಸುವಲ್ಲಿ ಇದು ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ಪಿಣರಾಯಿ ಹೇಳುತ್ತಾರೆ.
ಪ್ರಬಲ ರೋಗ ನಿರೋಧಕತೆ ಅಭಿವೃದ್ಧಿಯಾಗಬೇಕಾದರೆ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಲಸಿಕೆ ಹಾಕುವ ಅಗತ್ಯವಿದೆ. ಆದರೆ, ದೇಶದಲ್ಲಿ ಕೇವಲ 3.1 ಶೇ. ಜನರು ಮಾತ್ರ ಎರಡು ಪ್ರಮಾಣದ ಲಸಿಕೆಗಳನ್ನು ಪಡೆದಿದ್ದಾರೆ. ಲಸಿಕೆ ತಯಾರಕರು, ಲಸಿಕೆ ಲಭ್ಯತೆಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಲಾಭವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಭಾರತದಲ್ಲಿ ಹಲವಾರು ಸಾರ್ವಜನಿಕ ವಲಯದ ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ. ಬೌದ್ಧಿಕ ಆಸ್ತಿ ಹಕ್ಕುಗಳು, ಪೇಟೆಂಟ್ ಕಾನೂನುಗಳು ಮತ್ತು ಒಪ್ಪಂದಗಳು ಸಾರ್ವಜನಿಕ ಒಳಿತಿಗಾಗಿ ಲಭ್ಯವಿರುವ ಲಸಿಕೆಗಳ ತಯಾರಿಕೆಯನ್ನು ತಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಕಡ್ಡಾಯ ಪರವಾನಗಿ ಸೇರಿದಂತೆ ಸಾಧ್ಯತೆಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸಬೇಕು ಎಂದವರು ಬೊಟ್ಟುಮಾಡಿರುವರು.
ಲಸಿಕೆ ಲಭ್ಯತೆಯ ಸಂಪೂರ್ಣ ಜವಾಬ್ದಾರಿ ರಾಜ್ಯಗಳ ಮೇಲಿದೆ ಎಂಬ ಹೇಳಿಕೆಗಳು ಸಹಕಾರಿ ಫೆಡರಲಿಸಂನ ಮೂಲಭೂತ ಸಿದ್ಧಾಂತಗಳನ್ನು ಪ್ರಶ್ನಿಸುತ್ತವೆ. ಈ ಹಂತದಲ್ಲಿ ಕೇಂದ್ರವು ಅಗತ್ಯವಿರುವಷ್ಟು ಲಸಿಕೆಗಳನ್ನು ರಾಜ್ಯವು ನೇರವಾಗಿ ಸಂಗ್ರಹಿಸಿ ವಿತರಿಸಬೇಕು ಎಂಬ ರಾಜ್ಯಗಳ ನ್ಯಾಯಸಮ್ಮತ ಬೇಡಿಕೆಯನ್ನು ಜಂಟಿಯಾಗಿ ಮುಂದಿಡುವುದು ಈಗ ಅಗತ್ಯವಿದೆ. ಇದರಿಂದ ವೆಚ್ಚ ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.