ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಜುಲೈ 31ಕ್ಕೆ ಪ್ರಕಟಿಸಲಾಗುವುದು. 10ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ಅಂಕ ಮತ್ತು ಫಲಿತಾಂಶ ನಿರ್ಧರಿಸಲಾಗುತ್ತದೆ ಎಂದು ಸಿಬಿಎಸ್‌ಇ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
12ನೇ ತರಗತಿಯ ಆಂತರಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 40%, 11ನೇ ತರಗತಿ ಅಂತಿಮ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 30% ಮತ್ತು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 30% ಅಂಕ ನಿಗದಿಪಡಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ಹಿಂದಿನ 3 ಬೋರ್ಡ್ ಪರೀಕ್ಷೆಗಳಲ್ಲಿ ಶಾಲೆ ದಾಖಲಿಸಿದ ಸಾಧನೆಯನ್ನು ಮಾನದಂಡವನ್ನಾಗಿ ಇರಿಸಿಕೊಂಡು ಶಾಲೆಗಳ ಒಟ್ಟಾರೆ ಸಾಧನೆಯನ್ನು ನಿರ್ಧರಿಸಲಾಗುವುದು. ವಿದ್ಯಾರ್ಥಿಗಳಿಗೆ ಮುಕ್ತವಾಗಿ ಅಂಕ ನೀಡಿ ಶಾಲೆಗಳ ಸಾಧನೆಯನ್ನು ಉತ್ಪ್ರೇಕ್ಷಿಸಿರುವ ಶಾಲೆಗಳನ್ನು ಗುರುತಿಸಲು ಸಮಿತಿಯೊಂದನ್ನು ರೂಪಿಸಲಾಗುವುದು. ಶಾಲೆಯ ಇಬ್ಬರು ಹಿರಿಯ ಶಿಕ್ಷಕರು ಸಮಿತಿಯಲ್ಲಿರುತ್ತಾರೆ ಮತ್ತು ಅಗತ್ಯವಿದ್ದರೆ ಮತ್ತೊಬ್ಬ ತಜ್ಞರನ್ನು ನೇಮಿಸಲಾಗುವುದು.
ಅರ್ಹತಾ ಮಾನದಂಡ ತಲುಪಲು ವಿಫಲವಾದ ವಿದ್ಯಾರ್ಥಿಗಳ ಹೆಸರನ್ನು ಪುನರಾವರ್ತನೆ ವಿಭಾಗದಲ್ಲಿ ಇರಿಸಲಾಗುವುದು. ಫಲಿತಾಂಶದ ಬಗ್ಗೆ ಅತೃಪ್ತಿ ಇರುವ ವಿದ್ಯಾರ್ಥಿಗಳು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸುವಾಗ ಪರೀಕ್ಷೆ ಬರೆಯಬಹುದು ಎಂದವರು ಹೇಳಿದ್ದಾರೆ. 100 ಅಂಕಗಳ ಪ್ರಾಯೋಗಿಕ ಪರೀಕ್ಷೆಗೆ ಶಾಲೆಗಳು ಸಲ್ಲಿಸಿದ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಅಂಕ ನಿರ್ಧರಿಸಲಾಗುವುದು ಎಂದು ಸಿಬಿಎಸ್‌ಇ ನೇಮಿಸಿರುವ 12 ಸದಸ್ಯರ ಸಮಿತಿ ನ್ಯಾಯಾಲಯಕ್ಕೆ ತಿಳಿಸಿದೆ. ಅಂತಿಮ ಫಲಿತಾಂಶದಲ್ಲಿ ತಿದ್ದುಪಡಿ ಬಯಸುವ ವಿದ್ಯಾರ್ಥಿಗಳಿಗಾಗಿ ವಿವಾದ ಪರಿಹಾರ ಸಮಿತಿ ರೂಪಿಸುವಂತೆ ಸುಪ್ರೀಂಕೋರ್ಟ್ ಸಿಬಿಎಸ್‌ಇ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಸಿಐಎಸ್ಸಿಇ)ಗೆ ಸೂಚಿಸಿ ಈ ಕುರಿತ ಮುಂದಿನ ಕಲಾಪವನ್ನು ಜೂನ್ 21ಕ್ಕೆ ನಿಗದಿಗೊಳಿಸಿತು.