ನವದೆಹಲಿ: ದೇಶದಲ್ಲಿ ಕೋವಿಡ್-19 ಕಾರಣಗಳಿಂದಾಗಿ ಈ ಸಾಲಿನ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷದಂತೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸಿದರೆ, ಸಿಬಿಎಸ್‌ಇ ಅವರಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸುತ್ತದೆ. ಆದರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆ ನಡೆಸುವುದು ಸಾಧ್ಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಪರೀಕ್ಷೆ ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಗಳವಾರ ತಜ್ಞರು ಹಾಗೂ ಅಧಿಕಾರಗಳ ಸಭೆ ನಡೆಸಲಾಯಿತು. ಸಭೆಯ ಬಳಿಕ ಸರ್ಕಾರ ಪರೀಕ್ಷೆ ರದ್ದು ಪಡಿಸುವ ನಿರ್ಧಾರ ಪ್ರಕಟಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದು, 'ಭಾರತ ಸರ್ಕಾರವು 12ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಿದೆ. ಸಾಕಷ್ಟು ಸಲಹೆಗಳನ್ನು ಪಡೆದ ಬಳಿಕ ನಾವು ವಿದ್ಯಾರ್ಥಿ ಸ್ನೇಹಿ ತೀರ್ಮಾನವನ್ನು ಕೈಗೊಂಡಿದ್ದೇವೆ. ನಮ್ಮ ಯುವ ಸಮೂಹದ ಭವಿಷ್ಯ ಹಾಗೂ ಆರೋಗ್ಯವನ್ನು ಕಾಪಾಡುವಂತಹ ನಿರ್ಧಾರ ಇದಾಗಿದೆ' ಎಂದಿದ್ದಾರೆ.
ಕೋವಿಡ್-19 ಅನಿಶ್ಚಿತ ಪರಿಸ್ಥಿತಿಯ ಕಾರಣಗಳಿಂದ ಈ ವರ್ಷ ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ. ಶಾಲೆಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಪರೀಕ್ಷೆಯ ನಡೆಸುವುದರ ಬಗ್ಗೆ ಸಲಹೆಗಳನ್ನು ಕೇಳಲಾಗಿತ್ತು.
ಹಲವು ರಾಜ್ಯಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಪರೀಕ್ಷೆ ರದ್ದು ಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಿಬಿಎಸ್‌ಇ ಏಪ್ರಿಲ್ 18 ರಂದು 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿತ್ತು ಹಾಗೂ 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿತ್ತು.