ಕಾಸರಗೋಡು: ಸೇವೆಯಿಂದ ಕನ್ನಡಿಗರೊಬ್ಬರು ನಿವೃತ್ತರಾಗುತ್ತಿದ್ದಾರೆ. ಕಾಸರಗೊಡು ಜಿಲ್ಲೆಯ ಕೇಂದ್ರ ಸ್ಥಾನ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಫೇದಾರ್ ಆಗಿ ಜನಪರರಾಗಿದ್ದ ಪ್ರವೀಣ್ ರಾಜ್ ಅವರು ನಿವೃತ್ತರಾಗಿದ್ದಾರೆ. ಸತತವಾಗಿ 13 ಮಂದಿ ಜಿಲ್ಲಾಧಿಕಾರಿಗಳ ಅನುಯಾಯಿಯಾಗಿ ಕರ್ತವ್ಯದ ಅನುಭವವನ್ನು ಅವರು ಹೊಂದಿದ್ದಾರೆ.
ಕಾಸರಗೋಡು ನಗರದ ನೆಲ್ಲಿಕುಂಜೆ ಮೂಲ ನಿವಾಸಿಯಾಗಿರುವ ಕೆ. ಪ್ರವೀಣ್ ರಾಜ್ ಅವರು 1997ರಲ್ಲಿ ಸರಕಾರಿ ನೌಕರಿಗೆ ಪ್ರವೇಶಿಸಿದ್ದರು. ಕಚೇರಿ ಅಟೆಂಡರ್ ಹುದ್ದೆಯಲ್ಲಿ ಅವರು ವಿದ್ಯಾನಗರದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ನೌಕರಿಗೆ ಸೇರಿದ್ದರು. ನಂತರ ಅವರಿಗೆ ನೌಕರಿಯಲ್ಲಿ ಬಡ್ತಿ ಲಭಿಸಿದ್ದರೂ, ವರ್ಗಾವಣೆ ಹೊಂದಿರಲಿಲ್ಲ.
ಸುದೀರ್ಘ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ಸೇವೆ ನಡೆಸಿಕೊಂಡು ಬಂದಿದ್ದರು. ಈಗ ಸೇವೆಯಿಂದ ನಿವೃತ್ತರಾಗುತ್ತಿರುವುದು ಅವರಿಗೆ ಮಾತ್ರವಲ್ಲ, ಜಿಲ್ಲೆಯ ಸಾಮಾನ್ಯ ಜನತೆಗೂ ವಿಷಾದ ಉಂಟುಮಾಡುತ್ತಿದೆ. ತುಂಬ ಜನಪರ ವ್ಯಕ್ತಿತ್ವದ ಪ್ರವೀಣ್ ರಾಜ್ ಅವರು ಸರಕಾರಿ ಸೇವೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಮನವಿಗಳ ಸಹಿತ ಬರುವ ಕನ್ನಡಿಗರ ಮತ್ತು ಸಹೋದರ ಭಾಷಿಗರಿಗೆ ಮಾರ್ಗದರ್ಶಕರಾಗಿದ್ದರು.
ಪ್ರವೀಣ್ ಅವರು ಮೊದಲಿಗೆ ನೌಕರಿಗೆ ಪ್ರವೇಶಿಸುವ ವೆಳೆ ಸತ್ಯಜಿತ್ ಅವರು ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದರು. ಕಳೆದ 15 ವರ್ಷಗಳ ಹಿಂದೆ ಅವರಿಗೆ ಸಮವಸ್ತ್ರ, ಕೆಂಪು ಅಡ್ಡಪಟ್ಟಿ, ಬ್ಯಾಡ್ಜ್ ಧಾರನೆಯೊಮದಿಗೆ ಅವರು ದಫೇದಾರ್ ಆಗಿದ್ದರು. ಅಂದು ಮಿನ್ಹಾಜ್ ಆಲಂ ಜಿಲ್ಲಧಿಕಾರಿಯಾಗಿದ್ದರು. ತದನಂತರ 7 ಮಂದಿ ಜಿಲ್ಲಾಧಿಕಾರಿಗಳು ಕಾಸರಗೋಡಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಕರ್ತವ್ಯದ ಕೊನೆಯ ಹಂತದಲ್ಲಿ ಡಾ.ಡಿ.ಸಜಿತ್ ಬಾಬು ಅವರು ಜಿಲ್ಲಾಧಿಕಾರಿಯಾಗಿದ್ದರು.
ತಮ್ಮ ಮನೆಯನ್ನುಳಿದು ತಮ್ಮ ಬದುಕಿನ ಅತ್ಯಧಿಕ ಅವಧಿಯನ್ನು ಪ್ರವೀಣ್ ರಾಜ್ ಅವರು ಕಳೆದುದು ತಮ್ಮ ಕಚೇರಿಯ ಕರ್ತವ್ಯದಲ್ಲೇ. ಮುಂದೆ ನಿವೃತ್ತ ಬದುಕನ್ನು ಪತ್ನಿ ಆಶಾ ಅವರೊಂದಿಗೆ ಸಮಾಧಾನಕರವಾಗಿ ಬದುಕುವ ಸದಾಶಯದಲ್ಲಿರುವ ಅವರ ಮನದ ತುಂಬ ಕರ್ತವ್ಯದ ದಿನಗಳ ಮಧುರ ನೆನಪುಗಳ ಸಹವಾಸವಿದೆ.