ಕಾಸರಗೋಡು: ಬೇಕಲ ಪ್ರವಾಸೋದ್ಯಮಕ್ಕೆ ಪುನಶ್ಚೇತನ ಲಭಿಸಿದ್ದು, ಸ್ಥಗಿತಗೊಂಡಿದ್ದ ರೆಸಾರ್ಟ್ ಕಾಮಗಾರಿ ಪುನರಾರಂಭಿಸಲಾಗಿದೆ. ಉದುಮಾ ಗ್ರಾಮ ಪಂಚಾಯಿತಿಯ ಮಾಲಾಂಕುನ್ನು ಎಂಬಲ್ಲಿ ಬೇಕಲ್ ರೆಸಾರ್ಟ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್(ಬಿ.ಆರ್.ಡಿ.ಸಿ.) ರೆಸಾರ್ಟ್ ಸೈಟ್ ತಾರಾ ಹೋಟೆಲ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ದೀರ್ಘ ಕಾಲದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಮತ್ತೆ ಕೆಲಸ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸುಮಾರು 150 ಕೊಠಡಿಗಳಿರುವ ಈ ತಾರಾ ಹೋಟೆಲ್ ಸಮುಚ್ಚಯದಲ್ಲಿ ಸಭಾಂಗಣ, ಸ್ಪಾ ಇತ್ಯಾದಿ ಇರಲಿದೆ. ಬೇಕಲ ಬೀಚ್ ವತಿಯಿಂದ ಕಂಪನಿಗೆ ನೀಡಿರುವ 3 ಎಕ್ರೆ ಜಾಗದಲ್ಲಿ ರೆಸಾರ್ಟ್ ಗೆ ಆಗಮಿಸುವ ಮಂದಿಗಾಗಿ ನದಿಯ ಮೂಲಕ ಬೋಟ್‍ನಲ್ಲಿ ಸಮುದ್ರದ ಸೌಂದರ್ಯ ವೀಕ್ಷಣೆಗೂ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಬಿ.ಆರ್.ಡಿ.ಸಿ.ಯ ಆಡಳಿತ ನಿರ್ದೇಶಕರ ಹೊಣೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ವಹಿಸಿದ ನಂತರ ಬಿ.ಆರ್.ಡಿ.ಸಿ.ಯಿಂದ ಲೀಸ್ ಗೆ ಪಡೆದ ಮಾಲಾಂಕುನ್ನಿನ ಗ್ಲೋಬ್ ಲಿಂಕ್, ಚೇಟ್ಟುಕುಂಡಿನ ಏರ್ ಟ್ರಾವೆಲ್ಸ್ ಎಂಟರ್ ಪ್ರೈಸಸ್, ಚೆಂಬರಿಕ್ಕದ ಹಾಲಿಡೇ ಗ್ರೂಪ್ ಎಂಬ ಕಂಪನಿಗಳು ವಹಿಸಿಕೊಂಡಿರುವ ರೆಸಾರ್ಟ್ ಗಳ ಕಾಮಗಾರಿ ಮೊಟಕುಗೊಂಡಿದ್ದು, ಪ್ರಸಕ್ತ ಪುನಶ್ಚೇತನ ಕಾಣಲಾರಂಭಿಸಿದೆ.
1992ರಲ್ಲಿ ಕೇಂದ್ರ ಸರ್ಕಾರ ಬೇಕಲವನ್ನು ಬೀಚ್ ಡೆಸ್ಟಿನೇಷನ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ವಲಯ ಎಂದು ಘೋಷಿಸಿದ್ದು, ಈ ಮೂಲಕ ಬೇಕಲ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಬೇಕಲದಲ್ಲಿ ಪ್ರವಾಸೋದ್ಯಮ ಮೂಲ ಸೌಲಭ್ಯ ಒದಗಿಸಲು ಜಾಗತಿಕ ಮಟ್ಟದ ವಸತಿ ಸೌಲಭ್ಯ ಒದಗಿಸಲು 1995ರಲ್ಲಿ ರಾಜ್ಯ ಸರ್ಕಾರ ಬೇಕಲ ರೆಸಾರ್ಟ್ ಡೆವೆಲಪ್ ಮೆಂಟ್ ಕಾರ್ಪರೇಷನ್ ( ಬಿ.ಆರ್.ಟಿ.ಸಿ.) ರಚಿಸಲಾಗಿತ್ತು. 235 ಎಕ್ರೆ ಜಾಗವನ್ನು ವಹಿಸಿಕೊಂಡು ತಲಾ 40 ಎಕ್ರೆ ಜಾಗವನ್ನು ಪಳ್ಳಿಕ್ಕರೆ, ಚೆಮ್ನಾಡು, ಉದುವi, ಅಜಾನೂರು ಎಂಬ 4 ಗ್ರಾಮ ಪಂಚಾಯಿತಿಗಳಲ್ಲಿ 6 ಕಂಪನಿಗಳಿಗೆ ಲೀಸ್ ಗೆ ನೀಡಲಾಗಿತ್ತು. ರೆಸಾರ್ಟ್‍ಗಳ ಸಹಿತ ವಿವಿಧ ವಿಚಾರಗಳಿಗೆ ಸರ್ಕಾರ ಪ್ರವಾಸೋದ್ಯಮ ನಿಟ್ಟಿನಲ್ಲಿ ರಸ್ತೆಗಳನ್ನೂ ನಿರ್ಮಿಸಿತ್ತು. ಜತೆಗೆ ನಾಲ್ಕು ಗ್ರಾಮ ಪಂಚಾಯಿತಿಗಳ ಜನತೆಗೆ ಮತ್ತು ರೆಸಾರ್ಟ್ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ನಡೆಸಿರುವ 7 ಎಂ.ಎಲ್.ಡಿ.ವಾಟರ್ ಪ್ರಾಜೆಕ್ಟ್ ಈ ವ್ಯವಸ್ಥಿತ ಪ್ರವಾಸೋದ್ಯಮದ ಕೊಡುಗೆಯಾಗಿದೆ.