ನವದೆಹಲಿ|: ಪೂರ್ವ ಲಡಾಖ್ ನ ದಕ್ಷಿಣ ಪ್ಯಾಂಗೊಂಗ್ ಬೆಟ್ಟಗಳಲ್ಲಿ ಬೀಡುಬಿಟ್ಟಿದ್ದ ಭಾರತೀಯ ಹಾಗೂ ಚೀನಿ ಸೈನಿಕರು ಹಿಂದೆ ಸರಿಯಲಾರಂಭಿಸಿದ ಮರು ದಿನ ಅಂದರೆ ಫೆಬ್ರವರಿ 11ರಂದು ತೆಗೆಯಲಾದ ಉಪಗ್ರಹ ಚಿತ್ರಗಳಲ್ಲಿ ಭಾರತೀಯ ಹಾಗೂ ಚೀನಿ ಸೇನಾ ಠಾಣೆಗಳು ಪರಸ್ಪರ ಅಂದಾಜು 150 ಮೀಟರ್ ಅಂತರಲ್ಲಿ ಇರುವುದು ಕಂಡುಬಂದಿದ್ದು, ಸಂಘರ್ಷಾವಸ್ಥೆಯ ಸಂದರ್ಭದಲ್ಲಿ ಎರಡೂ ದೇಶಗಳ ಸೇನಾ ಜಮಾವಣೆಯ ಎಷ್ಟು ದಟ್ಟವಾಗಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.
ದಕ್ಷಿಣ ಪ್ಯಾಂಗೊಂಗ್ನ ರೆಝಾಂಗ್ ಲಾ ಪ್ರದೇಶದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಸೈನಿಕರು ಟೆಂಟ್ಗಳನ್ನು ಹಾಗೂ ವಸತಿಗಳನ್ನು ಸ್ಥಾಪಿಸಿರುವುದನ್ನು ಗೂಗ್ಲ್ ಅರ್ಥ್ ಪ್ರೊನಲ್ಲಿ ಅಪ್ಡೇಟ್ ಮಾಡಲಾದ ಛಾಯಾಚಿತ್ರಗಳು ತೋರಿಸಿವೆ. ಕೆಲವು ಕಡೆಗಳಲ್ಲಿ ಇತ್ತಂಡಗಳ ಸೇನಾ ನೆಲೆಗಳು ಇನ್ನಷ್ಟು ಸಮೀಪದಲ್ಲಿದ್ದವು ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ. '' ಕೈಲಾಸ್ ಪರ್ವತದುದ್ದಕ್ಕೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಎರಡೂ ಕಡೆಗಳ ಟ್ಯಾಂಕ್‌ಗಳು ಪರಸ್ಪರ 50 ಮೀಟರ್ ದೂರದಲ್ಲಿದ್ದವು'' ಎಂದು ಸೇನಾಮೂಲವೊಂದು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಎರಡು ಪ್ರಮುಖ ಭಾರತೀಯ ಸೇನಾ ನೆಲೆಗಳಲ್ಲಿ ಡಜನ್‌ಗಳಷ್ಟು ಟೆಂಟ್‌ಗಳು ಎಲ್‌ಎಸಿ ಸಮೀಪದಲ್ಲಿ ಸ್ಥಾಪನೆಯಾಗಿರುವುದನ್ನು ಗೂಗಲ್ ಅರ್ಥ್ ತೋರಿಸಿದೆ. ಭಾರತೀಯ ಸೈನಿಕರನ್ನು ಕೇವಲ ಭಾರತದ ಭಾಗದ ಗಡಿನಿಯಂತ್ರಣರೇಖೆಯ ವ್ಯಾಪ್ತಿಯೊಳಗೆ ಮಾತ್ರ ನಿಯೋಜಿಸಲಾಗಿದೆಯೆಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಗರಿಷ್ಠ ಸಂಖ್ಯೆಯಲ್ಲಿ ಭಾರತೀಯ ಯೋಧರನ್ನು ನಿಯೋಜಿಸಲಾಗಿರುವ ರೆಝಾಂಗ್ ಲಾ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನೆಲೆಗಳು 15,400-17000 ಅಡಿ ಎತ್ತರಲ್ಲಿ ಸ್ಥಾಪನೆಯಾಗಿದ್ದವು.
ಚೀನಿ ಪಡೆಗಳು ಸ್ಪಾಂಗ್ಗೂರ್ ಸರೋವರದ ದಂಡೆಯ 10 ಕಿ.ಮೀ. ಉದ್ದಕ್ಕೂ ಚೀನಿ ಪಡೆಗಳು ಬೀಡುಬಿಟ್ಟಿದ್ದುದನ್ನು ಗೂಗಲ್ ಅರ್ಥ್ನ ಚಿತ್ರಗಳು ತೋರಿಸಿವೆ. ಚೀನಾ ಕೂಡಾ ಫಿರಂಗಿ ನೆಲೆಗಳು ಮತ್ತು ಸೇನಾ ಮೂಲ ಸೌಕರ್ಯಗಳು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿರುವುದನ್ನು ಕೂಡಾ ನೂತನ ಉಪಗ್ರಹ ಚಿತ್ರಗಳು ತೋರಿಸಿವೆ.
ಕಳೆದ ವರ್ಷದ ಆಗಸ್ಟ್ ನಲ್ಲಿ ಚೀನಿ ಪಡೆಗಳು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿರುವ ತಮ್ಮ ನೆಲೆಗಳನ್ನು ತೆರವುಗೊಳಿಸಲು ನಿರಾಕರಿಸಿದ ಬಳಿಕ ಭಾರತೀಯ ಸೇನೆಯು ಕೈಲಾಸ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ಬೀಡುಬಿಟ್ಟಿತ್ತೆಂದು ಎನ್ಡಿಟಿವಿ ವರದಿ ತಿಳಿಸಿದೆ. ಭಾರತೀಯ ಸೇನೆಯನ್ನು ತೆರವುಗೆಳಿಸಲು ಚೀನಿ ಸೇನೆಯು ಹಲವು ಬಾರಿ ವಿಫಲ ಪ್ರಯತ್ನ ಮಾಡಿದೆಯಾದರೂ ಭಾರತೀಯ ಸೈನಿಕರು ತಮ್ಮ ನೆಲೆಗಳನ್ನು ಭದ್ರಗೊ ಳಿಸಿದ್ದರೆಂದು ಅದು ಹೇಳಿದೆ. ಎರಡೂ ಸೇನೆಗಳು ಟ್ಯಾಂಕ್‌ಗಳನ್ನು ಹಾಗೂ ಕವಚಾವೃತ ಸೈನಿಕ ಸಾಗಣೆ ವಾಹನಗಳನ್ನು ನಿಯೋಜಿಸಿದ್ದವು ಯಾವುದೇ ಕ್ಷಣದಲ್ಲಿಯೂ ಉದ್ವಿಗ್ನತೆಯ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆಯಿತ್ತೆಂದು ವಿಶ್ಲೇಷಕರು ತಿಳಿಸಿದ್ದಾರೆ.
ತರುವಾಯ ನಡೆದ ಉಭಯದೇಶಗಳ ನಡುವೆ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದ ಹೊರತಾಗಿಯೂ ಚೀನಿ ಪಡೆಗಳು ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ಹಾಟ್‌ಸ್ಪ್ರಿಂಗ್ಸ್, ಗೋಗ್ರಾ ಹಾಗೂ ಡೆಸ್ಪಾಂಗ್ನಲ್ಲಿ ಇನ್ನೂ ಉಳಿದುಕೊಂಡಿವೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಸಂಘರ್ಷಾವಸ್ಥೆಯ ಎಲ್ಲಾ ಸ್ಥಳಗಳಿಂದ ಸೇನಾ ಹಿಂತೆಗೆಯುವುದಕ್ಕಾಗಿ 12ನೇ ಸುತ್ತಿನ ಮಾತುಕತೆಗಳನ್ನು ನಡೆಸಲು ಉಭಯ ತಂಡಗಳು ಒಪ್ಪಿಕೊಂಡಿರುವುದಾಗಿ ಕಳೆದ ವಾರ ಭಾರತದ ವಿದೇಶಾಂಗ ಇಲಾಖೆ ತಿಳಿಸಿತ್ತು.