ಶ್ರೀನಗರ : ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ಎಲ್ಲ 15 ರೈಲು ನಿಲ್ದಾಣಗಳನ್ನು ಭಾರತೀಯ ರೈಲ್ವೆಯ ವೈಫೈ ನೆಟ್ವರ್ಕ್ನೊಂದಿಗೆ ಸಂಯೋಜಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯದ ಹೇಳಿಕೆ ರವಿವಾರ ತಿಳಿಸಿದೆ.
ಈಗ ರೈಲ್ವೈರ್ ವೈಪೈ ಜಮ್ಮು ಹಾಗೂ ಕಾಶ್ಮೀರದ ಬಾರಮುಲಾ, ಹಮ್ರೆ, ಪಟ್ಟಾನ್, ಮರೆಮ್, ಬುಡ್ಗಾಂವ್, ಶ್ರೀನಗರ, ಪಾಂಪೊರೆ, ಕಾಕಪೋರಾ, ಆವಂತಿಪುರ, ಪಂಜ್ಗಾಂವ್, ಬಿಜ್ ಬೆಹರಾ, ಅನಂತ್ ನಾಗ್, ಸಾದುರಾ, ಖಾಝಿಗಂಡ್ ಹಾಗೂ ಬನಿಹಾಲ್ ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ ಎಂದು ಅದು ಹೇಳಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಘೋಯಲ್, ''ಇಂದು ಜಾಗತಿಕ ವೈಫೈ ದಿನ. ದೇಶಾದ್ಯಂತದ 6,000ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಜೋಡಿಸುವ, ಜಗತ್ತಿನ ಅತಿ ದೊಡ್ಡ ಸಂಯೋಜಿತ ಸಾರ್ವಜನಿಕ ವೈಫೈ ನೆಟ್ವರ್ಕ್ ನಲ್ಲಿ ಒಂದಾಗಿರುವ ರೈಲ್ವೈರ್ ವೈಫೈ ನೆಟ್ವರ್ಕ್ ನಲ್ಲಿ ಕಾಶ್ಮೀರ ಕಣಿವೆಯ ಶ್ರೀನಗರ ಹಾಗೂ 14 ರೈಲು ನಿಲ್ದಾಣಗಳು ಭಾಗವಾಗುತ್ತಿರುವುದನ್ನು ಘೋಷಿಸಲು ಸಂತಸವಾಗುತ್ತಿದೆ'' ಎಂದರು. ಇದರೊಂದಿಗೆ ಕಾಶ್ಮೀರ ಕಣಿವೆಯ ಎಲ್ಲ ರೈಲು ನಿಲ್ದಾಣಗಳು ಈಗ ಸಾರ್ವಜನಿಕ ವೈಫೈ ಪಡೆಯಲಿವೆ ಎಂದು ಅವರು ಹೇಳಿದರು.
''ಇದು ಡಿಜಿಟಲ್ ಇಂಡಿಯಾ ಮಿಷನ್ ನ ನಿರ್ಣಾಯಕ ಹೆಜ್ಜೆ. ಇದನ್ನು ಕಾರ್ಯರೂಪಕ್ಕೆ ತರಲು ಅವಿರತವಾಗಿ ಶ್ರಮಿಸಿದ ಭಾರತೀಯ ರೈಲ್ವೆಯ ತಂಡ ಹಾಗೂ ರೈಲ್ ಟೆಲ್ ಗೆ ನನ್ನ ಪ್ರಶಂಸೆ ತಿಳಿಸಿದ್ದೇನೆ'' ಎಂದು ಅವರು ಹೇಳಿದರು.
ಎಲ್ಲಾ ರೈಲು ನಿಲ್ದಾಣಗಳಿಗೆ ಸಾರ್ವಜನಿಕ ವೈಫೈ ಒದಗಿಸುವ ಕೆಲಸವನ್ನು ರೈಲ್ವೆ ಸಚಿವಾಲಯ ರೈಲ್ ಟೆಲ್ ಗೆ ವಹಿಸಿತ್ತು ಎಂದು ಹೇಳಿಕೆ ತಿಳಿಸಿದೆ.