ತಿರುವನಂತಪುರ: ಮೊದಲ ಬಾರಿಗೆ ಪ್ರತಿಪಕ್ಷಗಳು 15 ನೇ ವಿಧಾನಸಭೆ ಬಹಿಷ್ಕರಿಸಿ ಸಭಾತ್ಯಾಗ ಮಾಡಿದ ಘಟನೆ ನಿನ್ನೆ ನಡೆದಿದೆ. ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷವು ಪ್ರತಿಪಕ್ಷವನ್ನು ಅವಮಾನಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ವಿಧಾನಸಭೆ ಆರಂಭಗೊಂಡ ಬಳಿಕ, ಆರೋಗ್ಯ ಕ್ಷೇತ್ರಗಳ ವಿವಿಧ ಲೋಪಗಳಿಗೆ ಸಂಬಂಧಿಸಿ ಆಡಳಿತ ಪಕ್ಷದೊಂದಿಗೆ ಪ್ರತಿಪಕ್ಷ ಮಾತಿನ ಚಕಮಕಿ ನಡೆಸಿದರೂ ಸಭಾತ್ಯಾಗ ನಡೆಸಿರಲಿಲ್ಲ.
ರಾಜ್ಯಕ್ಕೆ ಈ ಹಿಂದೆ ಎದುರಾಗಿದ್ದ ಓಕಿ ಚಂಡಮಾರುತ, ನಿಪಾ ವೈರಸ್ ಹಾವಳಿ, ಪ್ರವಾಹ ಮತ್ತು ಕೊರೋನಾದಂತಹ ವಿಪತ್ತುಗಳನ್ನು ಎದುರಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ದುರ್ಬಲಗೊಳಿಸುವ ವಿರೋಧ ಪಕ್ಷಗಳ ಕ್ರಮಗಳ ಮಧ್ಯೆ, ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ ಕ್ರಮಗಳು ಯಾವುವು? ಎಂಬ ಪ್ರಶ್ನೆ ಪ್ರತಿಪಕ್ಷವನ್ನು ಕೆರಳಿಸಿತು. ಈ ಪ್ರಶ್ನೆಯನ್ನು ಅಲತೂರ್ ಶಾಸಕ ಮತ್ತು ಸಿಪಿಎಂ ಮುಖಂಡ ಕೆ.ಡಿ.ಪ್ರಸೇನನ್ ಎತ್ತಿದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರತಿಪಕ್ಷಗಳು ದುರ್ಬಲಗೊಳಿಸುತ್ತಿವೆ ಎಂಬ ಆರೋಪದಿಂದ ಈ ವಿವಾದ ಹುಟ್ಟಿಕೊಂಡಿತು. ಪ್ರತಿಪಕ್ಷದ ನಾಯಕ ಪ್ರಶ್ನೆಗೆ ಅವಕಾಶ ನೀಡಬಾರದು ಎಂದು ಕೇಳಿದರೂ ಸ್ಪೀಕರ್ ನಿರಾಕರಿಸಿದರು. ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿ ಶಾಸಕಾಂಗ ಸಚಿವಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ.