ನವದೆಹಲಿ: ಜಗತ್ತಿನಾದ್ಯಂತ ಬಲಾಢ್ಯ ರಾಷ್ಟ್ರಗಳನ್ನೇ ಹೈರಾಣಿಗಿಸಿದ್ದ ಮಾರ ಕೊರೋನಾ ಸಾಂಕ್ರಾಮಿಕದಿಂದಾಗಿ ಇಂದು ವಿಶ್ವಜ ಬಾಲಕಾರ್ಮಿಕರ ಸಂಖ್ಯೆ 16 ಕೋಟಿಗೇರಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಯುನಿಸೆಫ್ ಬಿಡುಗಡೆ ಮಾಡಿರುವ ದತ್ತಾಂಶಗಳ ಅನ್ವಯ ಜಗತ್ತಿನಾದ್ಯಂತ ಬಾಲ ಕಾರ್ಮಿಕರ ಸಂಖ್ಯೆ 16 ಕೋಟಿಗೇರಿದ್ದು, ಇನ್ನೂ 90 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 2 ದಶಕಗಳಲ್ಲೇ ಇದೇ ಮೊದಲ ಬಾರಿಗೆ ಜಗತ್ತಿನ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದಕ್ಕೆ ಕೊರೋನಾ ಸಾಂಕ್ರಾಮಿಕವೇ ಕಾರಣ ಎಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆ, 'ಜಗತ್ತಿನಾದ್ಯಂತ ಬಾಲ ಕಾರ್ಮಿಕರ ಸಂಖ್ಯೆ 16 ಕೋಟಿಗೆ ಏರಿದೆ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಸಂಖ್ಯೆಗೆ ಇನ್ನೂ ಹಲವು ಲಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 84 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿ ಮಾರ್ಪಟ್ಟಿದ್ದಾರೆ ಹಾಗೂ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ 2022ರ ಕೊನೆಯ ವೇಳೆಗೆ ಇನ್ನೂ 90 ಲಕ್ಷ ಮಕ್ಕಳು ಇದೇ ಹಾದಿಯಲ್ಲಿ ಸಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ. ಬಾಲ ಕಾರ್ಮಿಕರ ಸಂಖ್ಯೆಯು ಎರಡು ದಶಕಗಳ ಅವಧಿಯಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ)ಗಳ ವರದಿಯಲ್ಲಿ ತಿಳಿಸಲಾಗಿದೆ.
'ಅತ್ಯಂತ ಅಗತ್ಯವಾಗಿರುವ ಸಾಮಾಜಿಕ ರಕ್ಷಣಾ ಯೋಜನೆಯ ಪ್ರಯೋಜನವು ಬಡ ಮಕ್ಕಳಿಗೆ ಸಿಗದಿದ್ದರೆ ಅವರು ಬಾಲ ಕಾರ್ಮಿಕರಾಗಿ ಮಾರ್ಪಡುವ ಸಾಧ್ಯತೆ ಇದೆ. ಆಗ ಈ ಅಪಾಯವನ್ನು ಎದುರಿಸುತ್ತಿರುವ ಮಕ್ಕಳ ಸಂಖ್ಯೆ 4.6 ಕೋಟಿಗೆ ಏರಬಹುದು. ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಸಂಖ್ಯೆಗಳು ಎಚ್ಚರಿಕೆಯ ಕರೆಗಂಟೆಯಾಗಿದ್ದು. ಹೊಸ ತಲೆಮಾರಿನ ಮಕ್ಕಳು ಅಪಾಯಕ್ಕೆ ಗುರಿಯಾಗುವುದನ್ನು ನಾವು ನೋಡುತ್ತಾ ನಿಲ್ಲಲು ಸಾಧ್ಯವಿಲ್ಲ ಎಂದು ಐಎಲ್‌ಒ ಮಹಾನಿರ್ದೇಶಕ ಗಯ್ ರೈಡರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2000-16ರ ಅವಧಿಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ 94 ಕೋಟಿ ಕುಸಿತ
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲಗೊಳಿಸುವಲ್ಲಿ ಸರಕಾರಗಳು ಮತ್ತು
ಅಂತರ್ರಾಷ್ಟ್ರೀಯ ಸಂಘಟನೆಗಳು ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದವು. 2000 ಮತ್ತು
2016ರ ನಡುವಿನ ಅವಧಿಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯು 9.4 ಕೋಟಿಯಷ್ಟು ಕುಸಿಯಿತು ಎಂದು
ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳು ಹೇಳುತ್ತವೆ. ಆದರೆ, ಕಳೆದ ನಾಲ್ಕು
ವರ್ಷಗಳ ಅವಧಿಯಲ್ಲಿ ಈ ಪ್ರವೃತ್ತಿಯು ಗಣನೀಯವಾಗಿ ಬದಲಾಗಿದೆ ಎಂದು ಹೇಳಲಾಗಿದೆ.