ತಿರುವನಂತಪುರಂ: ಲಾಕ್ ಡೌನ್ ನಿರ್ಬಂಧವಿದ್ದರೂ ಟಿವಿ ಧಾರಾವಾಹಿ ಚಿತ್ರೀಕರಿಸುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ನಟ ಸೇರಿದಂತೆ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಿರುವನಂತಪುರದ ಎಡವಾ ಬಳಿಯ ಸಮುದ್ರ ಮುಂಭಾಗದ ರೆಸಾರ್ಟ್ ಮೇಲೆ ಐರೂರ್ ಪೊಲೀಸರ ತಂಡ ಶುಕ್ರವಾರ ದಾಳಿ ನಡೆಸಿತ್ತು.
ಓಡಮ್ ಬಳಿಯ ರೆಸಾರ್ಟ್‌ನಲ್ಲಿ ಸ್ಟೇಷನ್ ಹೌಸ್ ಅಧಿಕಾರಿ ಜಿ ಗೋಪಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಪ್ರಮುಖ ಮಲಯಾಳಂ ಮನರಂಜನಾ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದ 18 ಜನರನ್ನು ಪೊಲೀಸರು ಸುತ್ತುವರೆದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕೋವಿಡ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿ ರೆಸಾರ್ಟ್ ಅನ್ನು ಸೀಲ್ ಮಾಡಲಾಗಿದೆ ಎಂದು ಎಸ್‌ಎಚ್‌ಒ ಗೋಪಕುಮಾರ್ ತಿಳಿಸಿದ್ದಾರೆ. 'ಈ ಪ್ರದೇಶಗಳಲ್ಲಿನ ರೆಸಾರ್ಟ್‌ಗಳನ್ನು ಮುಚ್ಚಲಾಗಿರುವುದರಿಂದ, ಶೂಟಿಂಗ್ ಆರಂಭದಲ್ಲಿ ಸ್ಥಳೀಯರ ಗಮನಕ್ಕೆ ಬರಲಿಲ್ಲ' ಎಂದು ಅವರು ಹೇಳಿದರು.
ಇದರ ಮಧ್ಯೆ ಹಿರಿಯ ಅಧಿಕಾರಿಗಳಿಗೆ ಶೂಟಿಂಗ್ ಬಗ್ಗೆ ಸುಳಿವು ಸಿಕ್ಕಿದ್ದು ಅದರ ಆಧಾರದ ಮೇಲೆ ದಾಳಿ ನಡೆಸಲಾಯಿತು. ಅನುಮೋದನೆ ಇಲ್ಲದೆ ರೆಸಾರ್ಟ್ ನಿರ್ಮಿಸಲಾಗಿದೆ. ಇನ್ನು ಸಮುದ್ರದ ಹತ್ತಿರ ಇದನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಮುಖ್ಯ ಪಾತ್ರಗಳಲ್ಲಿ ನಟಿಸಿದ ನಟರು ಗುರುವಾರ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.