ತಿರುವನಂತಪುರ: ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಯಾವುದೇ ಆದ್ಯತೆಯ ಷರತ್ತು ಇಲ್ಲದೆ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ. ಸೋಂಕಿನಿಂದ ಬಳಲುತ್ತಿರುವವರು ಸೇರಿದಂತೆ ವಿವಿಧ ವಿಭಾಗಗಳಿಗೆ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಲಸಿಕೆ ಜೂನ್ 21 ರಿಂದ ರಾಷ್ಟ್ರಾದ್ಯಂತ ಉಚಿತವಾಗಿ ವಿತರಿಸಲಾಗುವುದೆಂದು ಕೇಂದ್ರ ಸರ್ಕಾರ ಹೇಳಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಈ ನಿರ್ಣಯ ಹೊರಡಿಸಿದೆ. ಲಸಿಕೆ ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ಇದರ ಭಾಗವಾಗಿ ಲಸಿಕೆಗಳ ಪೂರೈಕೆಯನ್ನು ತೀವ್ರಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕೋವಿಡ್‍ನ ಮೂರನೇ ತರಂಗ ವಿಳಂಬವಾಗಲಿದೆ ಎಂಬ ಇತ್ತೀಚಿನ ವರದಿಯನ್ವಯ ಲಸಿಕೆ ಚುರುಕುಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರತಿದಿನ ಒಂದು ಕೋಟಿ ಜನರಿಗೆ ಲಸಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ. ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಲಸಿಕೆಗಳು ಸಿಗಲಿ ಎಂದು ಕೇರಳ ಆಶಿಸಿದೆ.