ನವದೆಹಲಿ: ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಎಲ್ಪಿಜಿ ಗ್ಯಾಸ್ ದರ ಇಳಿಕೆಯಾಗಿದೆ.
ಹೌದು. ಇಂಡಿಯನ್ ಆಯಿಲ್ ಕಾರ್ಪೋರೇಷನ್ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ 122ರೂ ಕಡಿತ ಮಾಡಿದೆ. ಆದರೆ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಐಒಸಿ ವೆಬ್‌ಸೈಟ್‌ನ ಪ್ರಕಾರ, ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ (ವಾಣಿಜ್ಯ ಬಳಕೆ ಸಿಲಿಂಡರ್) ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂ.ಗೆ ಇಳಿಕೆಯಾಗಿದೆ. ಈ ಮೊದಲು ಅದರ ಬೆಲೆ 1595.50 ರೂ. ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂ.ಗಳಷ್ಟು ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 45.50 ರೂ.ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ 1641 ರೂ.ನಿಂದ 1595.5 ರೂ.ಗೆ ಇಳಿದಿತ್ತು. ಇದಕ್ಕೂ ಮೊದಲು ಮೇ ತಿಂಗಳ ಮೊದಲು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು.
ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ದರ 1473.5ರೂಗೆ ಇಳಿಕೆಯಾಗಿದ್ದು, ಮುಂಬೈನಲ್ಲಿ 1422.5ರೂಗೆ ಇಳಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ 1544.5, ಚೆನ್ನೈನಲ್ಲಿ 1603.0ರೂ ಗೆ ಇಳಿಕೆಯಾಗಿದೆ.
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಇದೇ ವೇಳೆ ಗೃಹ ಬಳಕೆಯ ಅಥವಾ ದೇಶೀಯ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದಿಗೂ ದೆಹಲಿಯ ದೇಶೀಯ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 809 ರೂ ಇದ್ದು, ಕೊಚ್ಚಿಯಲ್ಲಿ 812 ರೂ ಇದೆ.