ನವದೆಹಲಿ: ಭಾರತಕ್ಕೆ ಕೋವಿಡ್-19 2ನೇ ಅಲೆಯ ಮಾರಣಾಂತಿಕ ಹೊಡೆತ ಬಿದ್ದಿದ್ದು, ಕೇವಲ ಸಾವು-ನೋವು ಮಾತ್ರವಲ್ಲದೇ ದೈನಂದಿನ ಜನಜೀವನದ ಮೇಲೂ ಕೊರೋನಾ ಸೋಂಕಿನ ಹೊಡೆತ ಬಲವಾಗಿ ಬಿದ್ದಿದೆ.
ಈ ಕುರಿತಂತೆ ಕಿಸ್ಲೇ ಸಾಮಾಜಿಕ ಅಧ್ಯಯನ ಸಂಸ್ಥೆ ಸಂಶೋಧನೆ ನಡೆಸಿದ್ದು, ಕೊರೋನಾ ವೈರಸ್ 2ನೇ ಅಲೆಯಿಂದಾಗಿ ದೇಶದ ಸಣ್ಣ ರೈತರು, ಮನೆಗೆಲಸಗಾರರು, ದಿನಗೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದು, ಕೆಲಸವಿಲ್ಲದೇ ಸಾಲದ ಸುಳಿಗೆ ಸಿಲುಕಿ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತಂತೆ ಸಂಶೋಧನೆಯ ದತ್ತಾಂಶಗಳು ಲಭ್ಯವಾಗಿದ್ದು, ಮೇ 19ರಿಂದ ಮೇ 25ರವರೆಗೆ ಉತ್ತರಾಖಂಡದ ಡೆಹ್ರಾಡೂನ್ ಮತ್ತು ನೀಲಗಿರೀಸ್ ಮತ್ತು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಅಧ್ಯಯನದ ವೇಳೆ ದಿನಗೂಲಿ ನೌಕರರು, ಸಣ್ಣ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳ ಕುರಿತು ಅಸಂತುಷ್ಟರಾಗಿದ್ದು, ಲಸಿಕೆ ಲಭ್ಯತೆ, ಪರೀಕ್ಷೆ ಮತ್ತು ಆರೋಗ್ಯ ಕೇಂದ್ರಗಳ ನಿರ್ವಹಣೆಯೇ ಸರ್ಕಾರಗಳಿಗೆ ಪ್ರಮುಖ ವಿಚಾರವಾಗಿತ್ತು. ಅವುಗಳ ನಿರ್ವಹಣೆಯಲ್ಲಿ ಮಗ್ನವಾಗಿದ್ದ ಸರ್ಕಾರ ಬಡವರನ್ನು ಮತ್ತು ದಿನಗೂಲಿ ಕಾರ್ಮಿಕರು, ಸಣ್ಣ ರೈತರನ್ನು ನಿರ್ಲಕ್ಷಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿರುದ್ಯೋಗಿಗಳು
ಈ ಸರ್ವೇ ಕಾರ್ಯದಲ್ಲಿ ಉತ್ತರಾಖಂಡದ ಟೆಹ್ರೀ ಗಾರ್ವ್ಪಾಲ್ ಜಿಲ್ಲೆಯ ಒಟ್ಟು 1,029 ಕಾರ್ಮಿಕರು ಮತ್ತು ಸಣ್ಣ ರೈತರು, 742 ಹೋಟೆಲ್ ನೌಕರರು, ರುದ್ರಪ್ರಯಾಗ್ ಜಿಲ್ಲೆಯ 64 ಕಾರ್ಮಿಕರು, ಡೆಹ್ರಾಡೂನ್ ನ 100 ದಿನಗೂಲಿ ನೌಕರರು, ತಮಿಳುನಾಡಿನ ಕೊಯಮತ್ತೂರು ಮತ್ತು ನೀಲಗಿರೀಸ್ ನ 101 ಸಣ್ಣ ರೈತರು ಮತ್ತು ದಿನಗೂಲಿ ನೌಕರರು ಪಾಲ್ಗೊಂಡಿದ್ದರು. ಈ ಪೈಕಿ ಬಹುತೇಕ ಮಂದಿ ತಾವು ಏಪ್ರಿಲ್ 1 ರಿಂದ ಮೇ 15ರವರೆಗೂ ಎಲ್ಲ ವಲಯದಲ್ಲೂ ನಿರೋದ್ಯೋಗಿಗಳಾಗಿದ್ದೆವು ಎಂದು ಹೇಳಿದ್ದಾರೆ. ರುದ್ರಪ್ರಯಾಗ ಮತ್ತು ಟೆಹ್ರಿ ಗಾರ್ವ್ಪಾಲ್ ಜಿಲ್ಲೆಗಳ ನೌಕರರು ಇದೇ ಸಮಯದಲ್ಲಿ ಶೇ75ರಷ್ಟು ನಿರುದ್ಯೋಗ ಸಮಸ್ಯೆ ಎದುರಿಸಿದೆವು ಎಂದು ಹೇಳಿಕೊಂಡಿದ್ದಾರೆ.
ಜೀವನ ನಿರ್ವಹಣೆಗೆ ಸಾಲ
ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ ನಲ್ಲಿ ಬರೊಬ್ಬರಿ ಶೇ.52ರಷ್ಟು ನೌಕರರು 10 ದಿನಗಳಿಗಿಂತಲೂ ಹೆಚ್ಚು ಸಮಯ ಮಾಡಲು ಕೆಲಸವಿಲ್ಲದೇ ಸಮಯ ಕಳೆದಿದ್ದೇವೆ ಎಂದು ಹೇಳಿದ್ದಾರೆ. ಡೆಹ್ರಾಡೂನ್ ನಲ್ಲಿ ಉದ್ಯೋಗಕ್ಕಾಗಿ ಕಾದು ಕುಳಿತಿದ್ದ ಕಾರ್ಮಿಕರ ಪೈಕಿ ಶೇ.52ರಷ್ಟು ಮಂದಿ ಜೀವನ ನಿರ್ವಹಣೆಗೆ ಸಾಲ ಮಾಡಲೇ ಬೇಕಾದ ಪರಿಸ್ಥಿತಿ ಸಿಲುಕಿದ್ದರು. ಈ ಪ್ರಮಾಣ ರುದ್ರಪ್ರಯಾಗ ಮತ್ತು ಟೆಹ್ರೀ ಗಾರ್ವ್ಪಾಲ್ ಜಿಲ್ಲೆಯಲ್ಲಿ ಶೇ. 54.3ರಷ್ಟಿದ್ದು, ತಮಿಳುನಾಡಿನಲ್ಲಿ ಶೇ. 92.7 ಮಂದಿ ತಮ್ಮ ದೈನಂದಿನ ಖರ್ಚಿಗಾಗಿ ಸಾಲ ಮಾಡಿದ್ದಾರೆ ಎನ್ನಲಾಗಿದೆ.
ಊಟದ ಪ್ರಮಾಣವನ್ನೇ ತಗ್ಗಿಸಿದ ಕಾರ್ಮಿಕರು
ಅಧ್ಯಯನದಲ್ಲಿ ದಾಖಲಾದ ಮತ್ತೊಂದು ಪ್ರಮುಖ ಅಂಶವೆಂದರೆ ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದ ಕಾರ್ಮಿಕರು ತಾವು ತಿನ್ನುತ್ತಿದ್ದ ಆಹಾರದ ಪ್ರಮಾಣವನ್ನೇ ತಗ್ಗಿಸಿದ್ದ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಈ ಅಧ್ಯಯನ ನಡೆದ ಅವಧಿಯಲ್ಲಿ ಡೆಹ್ರಾಡೂನ್ ನಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡ ಕಾರ್ಮಿಕರ ಪೈಕಿ ಶೇ.83ರಷ್ಟು ತಾವು ಸೇವಿಸುತ್ತಿದ್ದ ಆಹಾರದ ಪ್ರಮಾಣವನ್ನೇ ತಗ್ಗಿಸಿದ್ದಾರೆ. ಅಂತೆಯೇ ಅಧ್ಯಯನ ನಡೆದ ಅವಧಿಯಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಾಲ್ಗೊಂಡ ಕಾರ್ಮಿಕರ ಪೈಕಿ ಶೇ.96.75 ಕೂಡ ಇದೇ ಕ್ರಮವನ್ನು ಅನುಸರಿಸಿದ್ದಾರೆ. ದಿನಸಿ ಸಾಮಗ್ರಿ ಕೊಳ್ಳಲು ಸಾಕಷ್ಟು ಹಣದ ಕೊರತೆಯಿಂದಾಗಿಯೇ ತಾವು ಆಹಾರ ಪ್ರಮಾಣವನ್ನು ತಗ್ಗಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಲಸಿಕೆ ಮೇಲೆ ಅಪನಂಬಿಕೆ
ಇದೇ ವೇಳೆ ಕೋವಿಡ್ ಲಸಿಕೆ ಅಭಿಯಾನದ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಕಾರ್ಮಿಕರು, ಲಸಿಕೆ ಮೇಲಿನ ಅಪನಂಬಿಕೆಯಿಂದಾಗಿ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಿದ್ದಾರೆ. ಡೆಹ್ರಾಡೂನ್ ನಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಪೈಕಿ ಶೇ.26ರಷ್ಟು ಕಾರ್ಮಿಕರು ಲಸಿಕೆ ಅಪಾಯಕಾರಿ ಎಂಬ ಭಾವನೆಯಲ್ಲಿದ್ದರೆ, ಶೇ.14ರಷ್ಟು ಮಂದಿ ಲಸಿಕೆ ಕುರಿತಂತೆ ತಮಗೆ ಯಾವುದೇ ರೀತಿಯ ಮಾಹಿತಿಗಳೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ನಡೆದ ಅಧ್ಯಯನದಲ್ಲಿ ಪಾಲ್ಗೊಂಡ ಕಾರ್ಮಿಕರ ಪೈಕಿ ಶೇ.98ರಷ್ಟು ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳುವ ಕುರಿತು ಈ ವರೆಗೂ ತಾವು ಯೋಚಿಸಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಗಳ ನಿರ್ವಹಣೆ ಕುರಿತು ಅಸಮಾಧಾನ
ಅಂತೆಯೇ ಕೋವಿಡ್ ನಿರ್ವಹಣೆ ಕುರಿತಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ವಹಣೆ ಬಗ್ಗೆಯೂ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಡೆಹ್ರಾಡೂನ್ ನಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಪೈಕಿ 44ರಷ್ಟು ಮಂದಿ, ಗುಡ್ಡ ಪ್ರದೇಶಗಳಲ್ಲಿ ವಾಸ ಮಾಡುವ ಶೇ.34ರಷ್ಟು ಮಂದಿ, ತಮಿಳುನಾಡಿನಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರ ಪೈಕಿ ಶೇ.78ರಷ್ಟು ಮಂದಿ ಸರ್ಕಾರಗಳ ನಿರ್ವಹಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.