ಜಿನೀವಾ: ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-19 ಅಟ್ಟಹಾಸ ಮುಂದುವರೆದಿರುವಂತೆಯೇ ಇದೀಗ ಇದೇ ಡೆಡ್ಲಿ ವೈರಸ್ ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ.
29 ದೇಶಗಳಲ್ಲಿ ಆರ್ಭಟ
ಪೆರು ದೇಶದಲ್ಲಿ ಮೊದಲು ಪತ್ತೆಯಾದ ಈ ಕೋವಿಡ್-19 ವೈರಸ್ ನೂತನ ರೂಪಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಲಾಂಬ್ಡಾ ಎಂದು ಹೆಸರಿಸಿದ್ದು, ಈ ಲಾಂಬ್ಡಾ ರೂಪಾಂತರಿ ವೈರಸ್ ಪ್ರಸ್ತುತ ಜಗತ್ತಿನ ಬರೊಬ್ಬರಿ 29 ದೇಶಗಳಲ್ಲಿ ತನ್ನ ಆರ್ಭಟ ನಡೆಸುತ್ತಿದೆ. ಮೊದಲ ಬಾರಿಗೆ ಪೆರು ದೇಶದಲ್ಲಿ ಕಾಣಿಸಿಕೊಂಡ ಈ ರೂಪಾಂತರಿ ತಳಿ ಬಳಿಕ ಬ್ರೆಜಿಲ್, ಅರ್ಜೆಂಟೀನಾ ಮತ್ತು ಈಕ್ವೆಡಾರ್ ನಲ್ಲಿ ಕಾಣಿಸಿಕೊಂಡಿತು. ಕ್ರಮೇಣ ಈ ಲಾಂಬ್ಡಾ ವೈರಸ್ ಆರ್ಭಟ ಜೋರಾಗಿದ್ದು, ಲಕ್ಷಾಂತರ ಮಂದಿಗೆ ಸೋಂಕು ವ್ಯಾಪಕವಾಗಿ ಪ್ರಸರಿಸುವಂತೆ ಮಾಡುತ್ತಿದೆ.
ಅತ್ಯಂತ ಅಪಾಯಕಾರಿ ರೂಪಾಂತರಿ ತಳಿ
ಲಾಂಬ್ಡಾ ರೂಪಾಂತರಿಯ ಸಂತತಿಯನ್ನು ಜಾಗತಿಕ ವೇರಿಯಂಟ್ ಆಫ್ ಇಂಟರೆಸ್ಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ವರ್ಗೀಕರಿಸಿದೆ. ಮೊಟ್ಟ ಮೊದಲ ಬಾರಿಗೆ ಪೆರುವಿನಲ್ಲಿ ಈ ಲ್ಯಾಂಬ್ಡಾ ರೂಪಾಂತರಿ ವೈರಸ್ ನ್ನು ಗುರುತಿಸಲಾಗಿದೆ ಎಂದು ಸಾಪ್ತಾಹಿಕ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿತ್ತು. ಪೆರುವಿನಲ್ಲಿ ಲ್ಯಾಂಬ್ಡಾ ಪ್ರಕರಣ ಮಿತಿಮೀರಿದ್ದು, ಏಪ್ರಿಲ್ ತಿಂಗಳಿನಿಂದ ವರದಿಯಾದ ಪ್ರಕರಣಗಳಲ್ಲಿ 81 ಪ್ರತಿಶತ ಪ್ರಕರಣಗಳು ಈ ಹೊಸ ರೂಪಾಂತರದೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ.
ಚಿಲಿ ದೇಶದಲ್ಲಿ ಕಳೆದ 60 ದಿನಗಳಲ್ಲಿ ಶೇಕಡಾ 32ರಷ್ಟು ಲ್ಯಾಂಬ್ಡಾ ರೂಪಾಂತರಿ ಪ್ರಕರಣಗಳು ವರದಿಯಾಗಿದೆ. ಚಿಲಿಯಲ್ಲಿ, ಕಳೆದ 60 ದಿನಗಳಲ್ಲಿ ಸಲ್ಲಿಸಿದ ಎಲ್ಲಾ ಅನುಕ್ರಮಗಳಲ್ಲಿ ಇದು ಶೇಕಡಾ 32 ರಷ್ಟು ಲಾಂಬ್ಜಾ ರೂಪಾಂತರಿ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಮತ್ತು ಬ್ರೆಜಿಲ್‌ನಲ್ಲಿ ಮೊದಲು ಗುರುತಿಸಲ್ಪಟ್ಟ ಗಾಮಾ ರೂಪಾಂತರದಿಂದ ಮಾತ್ರ ಅದನ್ನು ಮೀರಿಸಲಾಗಿದೆ. ಇನ್ನು ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಂತಹ ಇತರ ದೇಶಗಳು ಸಹ ಹೊಸ ರೂಪಾಂತರದ ಹರಡುವಿಕೆಯನ್ನು ಹೆಚ್ಚಿಸಿವೆ ಎಂದು ವರದಿ ಮಾಡಿದೆ. ಈ ಲ್ಯಾಂಬ್ಡಾ ವೈರಸ್ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಗಾಮಾ ರೂಪಾಂತರಿಯ ವರ್ಗೀಕರಣವಾಗಿದೆ. ಅರ್ಜೆಂಟಿನಾ ಹಾಗೂ ಈಕ್ವೆಡಾರ್ನಲ್ಲೂ ಹೊಸ ರೂಪಾಂತರಿಯ ಪತ್ತೆಯಾಗಿದೆ.
ಲ್ಯಾಂಬ್ಡಾ ರೂಪಾಂತರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಕಲೆಹಾಕಲಾಗಿಲ್ಲ. ರೂಪಾಂತರಿಯ ಬಗ್ಗೆ ಹೆಚ್ಚಿನ ಅಧ್ಯಯನಗಳು ಮುಂದುವರೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ರೂಪಾಂತರಿ ತಳಿ ವೈರಸ್ ಗಳಿಗೆ ನಾಮಕರಣ
ಜಗತ್ತಿನ ವಿವಿಧೆಡೆ ಪತ್ತೆಯಾದ ರೂಪಾಂತರಿ ತಳಿ ವೈರಸ್ ಗಳಿಗೆ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿತ್ತು. ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19 ರ B.1.617.1 ಮತ್ತು B.1.617.2 ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದ್ದು, 'ಕಪ್ಪಾ' (kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಿದೆ. ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಕ್ರಮವಾಗಿ B.1.617.1ಗೆ ಕಪ್ಪಾ'(kappa) ಮತ್ತು B.1.617.2 ಗೆ 'ಡೆಲ್ಟಾ' (delta) ಎಂದು ಹೆಸರಿಸಲಾಗಿದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಘೋಷಣೆ ಮಾಡಿತ್ತು. ಭಾರತ ಮಾತ್ರವಲ್ಲದೇ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೋವಿಡ್ ತಳಿಗೆ ಬೀಟಾ, ಬ್ರಿಟನ್ ನಲ್ಲಿ ಪತ್ತೆಯಾದ ತಳಿಗೆ ಆಲ್ಫಾ, ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಗಮ್ಮಾ ಮತ್ತು ಝೀಟಾ, ಅಮೆರಿಕದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನಲ್ಲಿ ಪತ್ತೆಯಾದ ತಳಿಗೆ ಥೇಟಾ ಎಂದು ನಾಮಕರಣ ಮಾಡಿತ್ತು.