ನವದೆಹಲಿ: ಕೋವಿಡ್-19 ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿದ್ದು, ಆದರೆ ಷರತ್ತು ಅನ್ವಯಿಸಲಾಗಿದೆ.
ಕೊರೋನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಸದ್ಯ ಕೋವಿಡ್ ಸೋಂಕು ಪ್ರಸರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಗ್ರಾದಲ್ಲಿರುವ ಪ್ರೇಮ ಸೌಧ ತಾಜ್ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಇಂದಿನಿಂದ (ಜೂ.16) ಮತ್ತೆ ತೆರೆಯಲಾಗುತ್ತಿದ್ದು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಸುಮಾರು 2 ತಿಂಗಳ ಬಳಿಕ ಪ್ರವಾಸಿಗರಿಗೆ ತಾಜ್ಮಹಲ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಾಜ್ಮಹಲ್ನ್ನು ಕೊರೋನಾ ಕಾರಣದಿಂದಾಗಿ ಎರಡನೇ ಬಾರಿಗೆ ಏಪ್ರಿಲ್ 4ರಿಂದ ಮುಚ್ಚಲಾಗಿತ್ತು. ಕಳೆದ ವರ್ಷ ಕೂಡ ಕೋವಿಡ್ ಹೆಚ್ಚಾಗಿದ್ದರಿಂದ ತಾಜ್ಮಹಲ್ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದೆ.
ಷರತ್ತು ಅನ್ವಯ
ತಾಜ್ ಮಹಲ್ ವೀಕ್ಷಣೆಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದ್ದು, ಒಮ್ಮೆಗೆ ಕೇವಲ 650 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ ಸ್ಮಾರಕದ ಯಾವುದೇ ಭಾಗವನ್ನು ಮುಟ್ಟಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾಜ್ಮಹಲ್ಗೆ ಭೇಟಿ ನೀಡುವ ಪ್ರವಾಸಿಗರು ಸ್ಪಂಜಿನಂತಹ ಕಾರ್ಪೆಟ್ ಮೇಲೆ ಮಾತ್ರ ನಡೆಯಬೇಕು. ಅಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗಿದ್ದು, ಅವರ ಶೂ, ಚಪ್ಪಲಿಗಳು ಸ್ಯಾನಿಟೈಜ್ ಆಗುತ್ತವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊಂಚನೆಮ್ಮದಿ: ಸ್ಥಳೀಯ ಅಂಗಡಿ ಮಾರಾಟಗಾರರು
ಕಳೆದ 2 ತಿಂಗಳುಗಳಿಂದ ಅಂಗಡಿ ತೆರೆಯಲಾಗದೇ ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸಿದ್ದೆವು. ಈಗ ತಾಜ್ ಮಹಲ್ ಅನ್ನು ಪ್ರವಾಸಿಗರಿಗೆ ತೆರೆಯಲಾಗಿದ್ದು, ನಾವೂ ಕೂಡ ಅಂಗಡಿಗಳನ್ನು ತೆರೆಯುತ್ತಿದ್ದೇವೆ. ಇದರಿಂದ ನಮ್ಮ ಸಂಕಷ್ಟ ಕೊಂಚ ನೀಗುತ್ತದೆ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಪ್ರೇಕ್ಷಣೀಯ ಸ್ಥಳಗಳಾದ ಕೆಂಪುಕೋಟೆ, ತಾಜ್ಮಹಲ್, ಅಜಂತಾ ಗುಹೆ ಸೇರಿದಂತೆ ಎಲ್ಲಾ ಕೇಂದ್ರೀಕೃತ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್ 15ರಿಂದ ಮುಚ್ಚಲು ಸರ್ಕಾರ ಆದೇಶಿಸಿತ್ತು.