ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ -19 'ಡೆಲ್ಟಾ ರೂಪಾಂತರ' ವೈರಸ್ ಅತ್ಯಂತ 'ಕಳವಳಕಾರಿ'ಯಾದದ್ದು ಎಂದು ಪರಿಗಣಿಸಲಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ) ತಿಳಿಸಿದೆ.
ಇದೇವೇಳೆ, ಉಳಿದೆರಡು ತಳಿಗಳು ಅಷ್ಟು ಅಪಾಯಕಾರಿಯಲ್ಲ ಎಂದು ವಿಶ್ವ ಸಂಸ್ಥೆಯ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಏಕಾಏಕಿ ಕೋವಿಡ್ ಸ್ಫೋಟಕ್ಕೆ ಕಾರಣವೆಂದು ಹೇಳಲಾದ ವೈರಸ್‌ನ ಬಿ .1.617 ರೂಪಾಂತರವು ಮೂರು ವಂಶಾವಳಿಗಳಾಗಿ ವಿಂಗಡಣೆ ಆಗಿರುವುದರಿಂದ ಅದನ್ನು ಟ್ರಿಪಲ್ ರೂಪಾಂತರಿತ ವೈರಸ್ ಎಂದು ಕರೆಯಲಾಗುತ್ತದೆ.
ಕಳೆದ ತಿಂಗಳು ಎಲ್ಲ ರೂಪಾಂತರಿತ ವೈರಸ್‌ಗಳು 'ಕಳವಳಕಾರಿ'ಎಂದು ಘೋಷಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರ, ಉಪ-ವಂಶಾವಳಿಗಳಲ್ಲಿ ಒಂದು ಮಾತ್ರ ಆ ಲೇಬಲ್‌ಗೆ ಅರ್ಹವಾಗಿದೆ ಎಂದು ಹೇಳಿದೆ.
ಹೆಚ್ಚಿನ ಸಾರ್ವಜನಿಕ ಆರೋಗ್ಯ ಅಪಾಯಗಳು ಪ್ರಸ್ತುತ B.1.617.2ರೂಪಾಂತರದಿಂದ ಆಗುತ್ತಿವೆ ಎಂಬುದು ಈಗ ಸ್ಪಷ್ಟವಾಗಿದೆ. ಆದರೆ. ಇತರ ವಂಶಾವಳಿಗಳ ಪ್ರಸರಣದ ದರ ಕಡಿಮೆ ಇರುವುದನ್ನು ಗಮನಿಸಲಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗದ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ.
B.1.617.2 ರೂಪಾಂತರವು ಕಳವಳಕಾರಿ ವೈರಸ್ ಆಗಿ ಉಳಿದಿದೆ. ಜೊತೆಗೆ ವೈರಸ್‌ನ ಇತರ ಮೂರು ರೂಪಾಂತರಗಳು ಮೂಲ ಆವೃತ್ತಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವುಗಳು ಹೆಚ್ಚು ಹರಡುವ, ಕೆಲವು ಲಸಿಕೆ ರಕ್ಷಣೆಗಳನ್ನು ಮೀರಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿವೆ ಎಂದು ಡಬ್ಲ್ಯುಎಚ್‌ಓ ತಿಳಿಸಿದೆ.