ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಪೀಡಿತ ಕ್ಷೇತ್ರಗಳಿಗೆ ಮೋದಿ ಸರ್ಕಾರ ಆರ್ಥಿಕ ಪ್ಯಾಕೇಜ್ ಮುಂದುವರೆಸಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದರು.
ಪ್ರಗತಿ ಮತ್ತು ಉದ್ಯೋಗಕ್ಕೆ ಉತ್ತೇಜನ ನೀಡಲು ಸರ್ಕಾರವು ವಿಶೇಷ ಗಮನ ನೀಡಿದ್ದು,ಎಂಟು ಯೋಜನೆಗಳನ್ನು ಘೋಷಿಸಲಾಯಿತು. ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತ್ ನೆಟ್ ಪಿಪಿಪಿ ಮಾದರಿ ಮೂಲಕ ಪ್ರತಿ ಗ್ರಾಮಕ್ಕೆ ಬ್ರಾಡ್‌ಬ್ಯಾಂಡ್ ಕಲ್ಪಿಸಲು 19,041 ಕೋಟಿ ರೂ ಮೀಸಲಿಡಲಾಗಿದೆ.
2,50,000 ಗ್ರಾಮ ಪಂಚಾಯಿತಿಗಳ ಪೈಕಿ, 1,56,223 ಗ್ರಾಮ ಪಂಚಾಯಿತಿಗಳಲ್ಲಿ 2021 ಮೇ 31 ರೊಳಗೆ ಸೇವೆ ಒದಗಿದಲಾಗಿದೆ. 16 ರಾಜ್ಯಗಳಲ್ಲಿ (9 ಪ್ಯಾಕೇಜ್ ಗಳಾಗಿ ಒಟ್ಟುಗೂಡಿಸಲಾಗಿದೆ) ಪಿಪಿಪಿ ಮಾದರಿಯಲ್ಲಿ ಭಾರತ್ ನೆಟ್ ಅನ್ನು ಕಾರ್ಯಸಾಧ್ಯತೆಯ ಆಧಾರದ ಮೇಲೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 19,041 ಕೋಟಿ ರೂ. ಒದಗಿಸಲಾಗುವುದು. ಹೀಗಾಗಿ, ಭಾರತ್ ನೆಟ್ ಅಡಿಯಲ್ಲಿ ಒಟ್ಟು ವಿನಿಯೋಗವನ್ನು 61,109 ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಇದು ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ಜನವಸತಿ ಗ್ರಾಮಗಳನ್ನು ಒಳಗೊಳ್ಳಲು ಭಾರತ್ ನೆಟ್ ವಿಸ್ತರಣೆ ಮತ್ತು ನವೀಕರಣಕ್ಕೆ ಅನುವು ಮಾಡಿಕೊಡುತ್ತದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಗಳ ಅನುಮೋದನೆಯ ಪ್ರಸ್ತುತ ಪ್ರಕ್ರಿಯೆಗಳು ದೀರ್ಘವಾಗಿವೆ ಮತ್ತು ಅನೇಕ ಹಂತದ ಅನುಮೋದನೆಯನ್ನು ಒಳಗೊಂಡಿವೆ. ಪಿಪಿಪಿ ಪ್ರಸ್ತಾಪಗಳ ಮೌಲ್ಯಮಾಪನ ಮತ್ತು ಅನುಮೋದನೆ ಮತ್ತು ಇನ್ವಿಟ್ಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ಸ್ವತ್ತುಗಳಿಂದ ಹಣಗಳಿಕೆಗಾಗಿ ಹೊಸ ನೀತಿಯನ್ನು ರೂಪಿಸಲಾಗುವುದು. ಮೂಲಸೌಕರ್ಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹಣಕಾಸು ಒದಗಿಸುವಲ್ಲಿ ಖಾಸಗಿ ವಲಯದ ದಕ್ಷತೆಗೆ ಅನುಕೂಲವಾಗುವಂತೆ ಯೋಜನೆಗಳ ತ್ವರಿತ ಅನುಮೋದನೆಯನ್ನು ಖಾತ್ರಿಪಡಿಸುವ ಗುರಿಯನ್ನು ಈ ನೀತಿಯು ಹೊಂದಿದೆ.