ನ್ಯೂಯಾರ್ಕ್: ಅಮೆರಿಕದಲ್ಲಿರುವ ಭಾರತೀಯ ಮೂಲದ ವೃತ್ತಿಪರ ವೈದ್ಯರ ತಂಡವೊಂದು ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದೆ.
ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ವೈದ್ಯರು ಮತ್ತು ವೃತ್ತಿಪರರ ಗುಂಪೊಂದು ಈ ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದು, ಆಸ್ಪತ್ರೆಯ ಹಾಸಿಗೆಗಳನ್ನು ನೈಜ-ಸಮಯದ ನವೀಕರಣಗಳೊಂದಿಗೆ (ರಿಯಲ್ ಟೈಮ್ ಅಪ್ ಡೇಷನ್) ತೋರಿಸುವ ಆನ್‌ಲೈನ್ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಸೋಂಕತರು ಮತ್ತು ಅವರ ಸಂಬಂಧಿಕರು ಹಾಸಿಗೆ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿ ಪಡೆಯಬಹುದು. ಇದು ರೋಗಿಗಳಿಗೆ ನಿರ್ಣಾಯಕ ಸಂದರ್ಭದಲ್ಲಿ ನೆರವಿಗೆ ಬರುತ್ತದೆ ಎಂದು ಹೇಳಲಾಗಿದೆ.
'ಪ್ರಾಜೆಕ್ಟ್ ಮದದ್' ಕಾರ್ಯಕ್ರಮದಡಿಯಲ್ಲಿ ‘madadmaps.com’ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮ್ಯಾಪ್ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ನೈಜ ಮಾಹಿತಿಯನ್ನು ಪಡೆಯಬಹುದಾಗಿದೆ’ ಎಂದು ವಾಷಿಂಗ್ಟನ್ ಮೂಲದ ಮದದ್ ಮ್ಯಾಪ್ಸ್’ನ ಮುಖ್ಯ ವಿನ್ಯಾಸಕಾರ ಡಾ.ರಾಜೇಶ್ ಅನುಮೊಲು ಅವರು ತಿಳಿಸಿದರು.ಸ ಅಂದಹಾಗೆ ಮದದ್ ಎಂದರೆ ನೆರವು ಎಂಬ ಅರ್ಥ ಬರುತ್ತದೆ. ಸೋಂಕಿತರಿಗೆ ನೆರವಾಗುವ ಉದ್ದೇಶದಿಂದಲೇ ಈ ಮ್ಯಾಪ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಾಜೆಕ್ಟ್ ಮದದ್ 15 ಭಾರತೀಯ ಮತ್ತು ಭಾರತೀಯ ವಲಸೆ ವೈದ್ಯರು / ಕೋವಿಡ್-19 ತಜ್ಞರು ಮತ್ತು 12 ವೃತ್ತಿಪರರ ಸ್ವಯಂಪ್ರೇರಿತ ತಂಡದಿಂದ ಸಿದ್ಧವಾಗಿದ್ದು, ಇದರೊಂದಿಗೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ನೋಂದಾಯಿತ ವೈದ್ಯಕೀಯ ವೈದ್ಯರ (ಆರ್‌ಎಂಪಿ) "ಸರಿಯಾದ ಶಿಕ್ಷಣ ಮತ್ತು ತರಬೇತಿ" ಎಂಬ ಧ್ಯೇಯದೊಂದಿಗೆ ರಚಿಸಲಾಗಿದೆ. ಗ್ರಾಮೀಣ ಭಾರತದಲ್ಲಿ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿವೆ. ಈ ಸಂಕಷ್ಟದ ಸಂದರ್ಭದಲ್ಲಿ ನಾಗರಿಕರು ಪ್ರತಿಯೊಂದು ಆಸ್ಪತ್ರೆಗಳಿಗೆ ಕರೆ ಮಾಡಿ, ಹಾಸಿಗೆ ಲಭ್ಯತೆ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಹಲವು ಬಾರಿ ರೋಗಿ, ಆಸ್ಪತ್ರೆಗೆ ತಲುಪುವ ಮುನ್ನವೇ ಹಾಸಿಗೆಗಳು ಭರ್ತಿಯಾಗಿರುತ್ತವೆ. ಕೋವಿಡ್‌ನ ಈ ಸಂದರ್ಭದಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ನೈಜ ಸಮಯದ ಮಾಹಿತಿಯನ್ನು ನೀಡುವ ಭಾರತದ ಮೊದಲ ಮ್ಯಾಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮದದ್ ಮ್ಯಾಪ್ಸ್ ಮುಂದಿನ ದಿನಗಳಲ್ಲೂ ಸಹಾಯಕ್ಕೆ ಬರಲಿದೆ ಎಂದು ಪ್ರಾಜೆಕ್ಟ್ ಮದದ್‌ನ ಮುಖ್ಯಸ್ಥ ರಾಜ ಕಾರ್ತಿಕೇಯ ಅವರು ಹೇಳಿದ್ದಾರೆ.
ಮ್ಯಾಪ್ ಸೇವೆಯಲ್ಲಿ ಏನೆಲ್ಲಾ ಲಭ್ಯ
ಈ ಮದದ್ ಮ್ಯಾಪ್ ನಲ್ಲಿ ಆಸ್ಪತ್ರೆಯ ಹೆಸರು, ವಿಳಾಸ, ಐಸಿಯು ಹಾಸಿಗೆ, ವೆಂಟಿಲೇಟರ್ ಲಭ್ಯತೆ, ಆಮ್ಲಜನಕ ಪೂರೈಕೆ, ಆಸ್ಪತ್ರೆಯ ದೂರವಾಣಿ ಸಂಖ್ಯೆ, ಆಸ್ಪತ್ರೆಗೆ ಹೋಗುವ ಮಾರ್ಗಗಳನ್ನು ಈ ಮ್ಯಾಪ್ ತೋರಿಸುತ್ತದೆ ಎಂದು ತಂಡ ಹೇಳಿಕೊಂಡಿದೆ. ಭಾರತ ಸರ್ಕಾರ ಮತ್ತು ಇತರೆ ಹೂಡಿಕೆದಾರರೊಂದಿಗೆ ಈ ಮ್ಯಾಪ್ ಅನ್ನು ಸ್ವಾಧೀನ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಈ ಮ್ಯಾಪ್ ಅನ್ನು ಕೋವಿನ್ ಅಥವಾ ಆರೋಗ್ಯಸೇತು ಆ್ಯಪ್‌ನಲ್ಲಿ ಸೇರ್ಪಡೆ ಮಾಡಿದರೆ, ದೇಶದ ಹಲವು ಜನರನ್ನು ತಲುಪಬಹುದು. ಇದರಿಂದಾಗಿ ಸೋಂಕಿತರ ಸಂಕಷ್ಟ ಕೊಂಚವಾದರೂ ತಪ್ಪುವ ಭರವಸೆ ತಮಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕೊರೋನಾ ಸಾಂಕ್ರಾಮಿಕದ 2ನೇ ಅಲೆಯಲ್ಲಿ ತತ್ತರಿಸಿ ಹೋಗಿರುವ ಭಾರತದಲ್ಲಿ ಹಾಸಿಗೆ ಲಭ್ಯತೆ ಸೇರಿದಂತೆ ನಾನಾ ಸಂಕಷ್ಟಗಳನ್ನು ರೋಗಿಗಳು ಎದುರಿಸುತ್ತಿದ್ದಾರೆ.