ಅಹ್ಮದಾಬಾದ್: ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರ ಆರಂಭಿಸಿರುವ ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಮಾಡಿದ್ದು, ನಮ್ಮ ಈ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಲಸಿಕೆ ನೀಡುವ ಕಾರ್ಯವನ್ನು ತ್ವರಿತಗೊಳಿಸಲಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಒಂದು ಮಹತ್ವದ ಪ್ರಯಾಣ ಆರಂಭವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆಲ್ಲಾ ಉಚಿತ ಲಸಿಕೆ ನೀಡುವ ಮಹತ್ವದ ಕಾರ್ಯ ಇಂದು ಆರಂಭವಾಗಿದೆ ಎಂದರು.
ಇಷ್ಟೊಂದು ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ದೇಶಗಳಲ್ಲಿ ವಯಸ್ಕರಿಗೆಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವುದು ನಿಜಕ್ಕೂ ಸವಾಲಿನ ವಿಷಯ.ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ದೇಶಾದ್ಯಂತ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಈ ಲಸಿಕೆ ಕಾರ್ಯಕ್ರಮದಲ್ಲಿ ಭಾರತ ಈಗಾಗಲೇ ಮುಂಚೂಣಿಯಲ್ಲಿದೆ ಎಂದರು.
ಇನ್ನು ಮುಂದಿನ ಹೆಜ್ಜೆ ನಮ್ಮದು ಎಲ್ಲರಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ತಲುಪಿಸುವುದಾಗಿದೆ ಎಂದರು. ಅವರು ಎರಡು ದಿನಗಳ ಅಹ್ಮದಾಬಾದ್ ಭೇಟಿ ಕೈಗೊಂಡಿದ್ದಾರೆ.