ಚೆನ್ನೈ: ವಂದಲೂರಿನ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದಲ್ಲಿ 9 ವರ್ಷದ ಸಿಂಹಿಣಿ ನೀಲಾ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದು, ಇತರ ಎಂಟು ಸಿಂಹಗಳಿಗೆ ಪಾಸಿಟಿವ್ ಸೋಂಕು ದೃಢಪಟ್ಟಿದೆ.
ಪ್ರಾಣಿ ಸಂಗ್ರಹಾಲಯದ ಸಫಾರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಿಂಹಿಣಿ ಗುರುವಾರ ಸಂಜೆ 6-15 ರಲ್ಲಿ ಮೃತಪಟ್ಟಿದೆ. ಮೃತ ಸಿಂಹಿಣಿಗೆ ರೋಗಲಕ್ಷಣವಿಲ್ಲ ಮತ್ತು ಬುಧವಾರ ಮೂಗಿನಿಂದ ವಿಸರ್ಜನೆ ಮಾತ್ರ ಕಂಡುಬಂದಿತ್ತು ಕೂಡಲೇ ಚಿಕಿತ್ಸೆ ನೀಡಲಾಗಿತ್ತು ಎಂದು ಶುಕ್ರವಾರ ಪ್ರಾಣಿ ಸಂಗ್ರಹಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಮೇ 26 ರಂದು ಸಫಾರಿ ಪ್ರದೇಶದಲ್ಲಿನ ಐದು ಸಿಂಹಗಳಿಗೆ ಹಸಿವಿನ ಕೊರತೆ ಹಾಗೂ ಸಾಂದರ್ಭಿಕ ಕೆಮ್ಮು ಬರುತ್ತಿತ್ತು. ಪ್ರಾಣಿ ಸಂಗ್ರಹಾಲಯದ ಪಶುವೈದ್ಯರ ತಂಡ ಕೂಡಲೇ ವಿಚಾರಣೆ ನಡೆಸಿ, ಶಿಷ್ಟಾಚಾರದ ಪ್ರಕಾರ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದರು ಎಂದು ಪ್ರಾಣಿ ಸಂಗ್ರಹಾಲಯ ತಿಳಿಸಿದೆ.
ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲು ಸಂಗ್ರಹಾಲಯದಲ್ಲಿನ ಪಶುವೈದ್ಯರನ್ನು ಸೇರಲು ನಮ್ಮ ಮನವಿ ಮೇರೆಗೆ ತಮಿಳುನಾಡು ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ತಜ್ಞರ ತಂಡವನ್ನು ನಿಯೋಜಿಸಿದೆ. ರಕ್ತದ ಮಾದರಿಯನ್ನು ತಮಿಳುನಾಡು ಪಶು ವೈದ್ಯಕೀಯ ಪ್ರಾಣಿ ವಿಜ್ಞಾನ ವಿಶ್ವವಿದ್ಯಾನಿಲಯ-ಟಿಎಎನ್ ಯುವಿಎಎಸ್ ಮತ್ತು 11 ಸಿಂಹಗಳ ಮೂಗಿನ ಸ್ವಾಬ್, ಮಲದ ಮಾದರಿಯನ್ನು ಭೂಪಾಲ್, ಮಧ್ಯ ಪ್ರದೇಶದಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಡಿಸೀಸ್ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯೋಗಾಲಯ ಪರೀಕ್ಷೆ ಪ್ರಕಾರ, 11 ಸಿಂಹಗಳ ಪೈಕಿ 9 ಸಿಂಹಗಳ ಮಾದರಿಯಲ್ಲಿ ಸಾರ್ಸ್ ಕೋವ್-2 ಪಾಸಿಟಿವ್ ದೃಢಪಟ್ಟಿದೆ. ವರದಿಗಳು ಸುಳ್ಳೋ ಅಥವಾ ನಿಜವೋ ಎಂಬುದನ್ನು ದೃಢಪಡಿಸಿಕೊಳ್ಳಲು ಶುಕ್ರವಾರ ಮತ್ತೆ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹೈದರಾಬಾದ್‌ನ ಸೆಲ್ಯುಲಾರ್ ಅಂಡ್ ಮೊಲಿಕ್ಯೂಲರ್ ಬಯೋಲಾಜಿ ಸೆಂಟರ್ ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.